ಟ್ವಿಟರ್ 50 ಲಕ್ಷ ರೂ. ದಂಡ ಪಾವತಿಗೆ ಕರ್ನಾಟಕ ಹೈಕೋರ್ಟ್ ತಡೆ; ವಾರದೊಳಗೆ 25 ಲಕ್ಷ ರೂ ಠೇವಣಿಗೆ ಸೂಚನೆ

ಟ್ವಿಟರ್ ಸಂಸ್ಥೆಗೆ ಹೈಕೋರ್ಟ್‌ನ ಏಕ ಸದಸ್ಯ ಪೀಠ ವಿಧಿಸಿದ್ದ 50 ಲಕ್ಷ ರೂ. ದಂಡದ ಆದೇಶಕ್ಕೆ ಮುಂದಿನ ವಿಚಾರಣೆವರೆಗೂ ದ್ವಿಸದಸ್ಯ ಪೀಠ ತಡೆ ನೀಡಿ ಹೊಸ ಆದೇಶ ಹೊರಡಿಸಿದೆ. 
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಟ್ವಿಟರ್ ಸಂಸ್ಥೆಗೆ ಹೈಕೋರ್ಟ್‌ನ ಏಕ ಸದಸ್ಯ ಪೀಠ ವಿಧಿಸಿದ್ದ 50 ಲಕ್ಷ ರೂ. ದಂಡದ ಆದೇಶಕ್ಕೆ ಮುಂದಿನ ವಿಚಾರಣೆವರೆಗೂ ದ್ವಿಸದಸ್ಯ ಪೀಠ ತಡೆ ನೀಡಿ ಹೊಸ ಆದೇಶ ಹೊರಡಿಸಿದೆ. 

ಕೆಲ ವೈಯಕ್ತಿಕ ಖಾತೆಗಳಿಗೆ ನಿರ್ಬಂಧ ವಿಧಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಟ್ವಿಟ್ಟರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಂಚದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಪಾವತಿಸಬಹುದಾದ ಶೇ.50 ರಷ್ಟು ಮೊತ್ತವನ್ನು ದಂಡವನ್ನಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಮೇಲ್ಮನವಿದಾರರ ಪರವಾಗಿ (ಎಕ್ಸ್ ಕಾರ್ಪ್ ಅಥವಾ ಟ್ವಿಟರ್) ಇರಲಿದೆ ಎಂದು ತಿಳಿಸಿದೆ. 

ಅಲ್ಲದೆ ಟ್ವಿಟ್ಟರ್ ತನ್ನ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ದಂಡದ ಒಟ್ಟು ಮೊತ್ತದಲ್ಲಿ ಶೇ.50ರಷ್ಟು (25 ಲಕ್ಷ ರೂ) ಮುಂದಿನ ಒಂದು ವಾರದಲ್ಲಿ (ಠೇವಣಿ)ಪಾವತಿಸಲು ನಿರ್ದೇಶನ ನೀಡಿದೆ. ಇದೇ ವೇಳೆ ತಡೆಯಾಜ್ಞೆಯನ್ನು ತೆರವುಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಆಕ್ಷೇಪಣೆಗಳನ್ನು ಮುಂದಿನ ದಿನಾಂಕದ ವೇಳೆಗೆ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ. ಜೊತೆಗೆ, ಎಕ್ಸ್ ಕಾರ್ಪ್ ಸಂಸ್ಥೆ ಟ್ವಿಟರ್‌ನ ಕೆಲ ಖಾತೆಗಳನ್ನು ನಿರ್ಬಂಧ ವಿಧಿಸುವಂತೆ ಸಕ್ಷಮ ಪ್ರಾಧಿಕಾರ ಸೂಚನೆಯನ್ನು ಉಲ್ಲಂಘಿಸಿ ದೇಶದ ಕಾನೂನಿಗೆ ಅಗೌರವ ತೋರಿದ್ದು, ಯಾವುದೇ ಖಾತೆಯನ್ನು ನಿರ್ಬಂಧಿಸದೆ ನಿರ್ಲಕ್ಷ್ಯ ಮಾಡಿದೆ ಎಂದೂ ಪೀಠ ಹೇಳಿದೆ.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಕರ್ನಾಟಕ ಹೈಕೋರ್ಟ್ ಎಕ್ಸ್ ಕಾರ್ಪ್ ವಿರುದ್ಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಸರ್ಕಾರವು 2021 ರ ಟೇಕ್ ಡೌನ್ ಆದೇಶವನ್ನು ಅನುಸರಿಸಿದೆ ಎಂದು ತೋರಿಸಲು ಎಕ್ಸ್ ಕಾರ್ಪ್ ಯಾವುದೇ ದಾಖಲೆಯನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಗಮನಿಸಿತು, ಆದರೆ ಸರ್ಕಾರವು ವಿಧಿಸುವ ನೋಟಿಸ್ ಕಳುಹಿಸಿದಾಗ ಅದರ ಮೇಲೆ ದಂಡ ಆದೇಶದ ವಿರುದ್ಧ ಅದು ಹೈಕೋರ್ಟ್ ಮೆಟ್ಟಿಲೇರಿತು. ಟೇಕ್ ಡೌನ್ ಮತ್ತು ಬ್ಲಾಕಿಂಗ್ ಆದೇಶಗಳನ್ನು ಪಾಲಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸುವುದು ಕಂಪನಿಯ ಜವಾಬ್ದಾರಿಯೇ ಹೊರತು ಸರ್ಕಾರದ ಜವಾಬ್ದಾರಿಯಲ್ಲ. ದೇಶದ ಕಾನೂನಿನ ಬಗ್ಗೆ ಸ್ವಲ್ಪ ಗೌರವವನ್ನು ಹೊಂದಿರಬೇಕು ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮನು ಕುಲಕರ್ಣಿ ವಾದ ಮಂಡಿಸಿ ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಲಾಗಿದೆ ಎಂದು ಏಕ ಸದಸ್ಯ ಪೀಠಕ್ಕೆ ತಿಳಿಸಲಾಗಿದೆ ಎಂದು ವಿವರಿಸಿದರು. ಮೇಲ್ಮನವಿ ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಅರ್ಜಿ ವಿಚಾರಣೆಗೆ ಅರ್ಹವಿಲ್ಲ, ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿರ್ಬಂಧ ವಿಧಿಸಿರುವ ಖಾತೆದಾರರ ಪರವಾಗಿ ಎಕ್ಸ್ ಕಾರ್ಪ ಸಂಸ್ಥೆ ಅರ್ಜಿ ಸಲ್ಲಿಸಿದೆ. ಇತರರ ಬೇಡಿಕೆ ಪೂರೈಕೆ ಮಾಡಲು ಅರ್ಜಿದಾರ ಸಂಸ್ಥೆ ಮುಂದಾಗಿದೆ ಎಂಬ ಕೇಂದ್ರದ ವಾದವನ್ನು ಏಕಸದಸ್ಯ ಪೀಠ ತಿರಸ್ಕರಿಸಿದ್ದು, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದೆ.

ಅಲ್ಲದೆ, ಎಕ್ಸ್ ಕಾರ್ಪ ಸಂಸ್ಥೆ ಒಂದು ಅಂಗಡಿಯಿದ್ದಂತೆ, ಅಂಗಡಿಯಲ್ಲಿ ಎಲ್ಲ ರೀತಿಯ ಉತ್ಪನ್ನಗಳಿರುತ್ತವೆ. ನಿಮಗೆ ಇಷ್ಟವಿಲ್ಲದ ವಸ್ತುಗಳು ಮಾರಾಟ ಮಾಡುವುದಕ್ಕೆ ಆಕ್ಷೇಪ ಮಾಡಬಹುದು. ಅಂಗಡಿ ಮುಚ್ಚಲಾಗುವುದಿಲ್ಲ. ಅಂಗಡಿಯಲ್ಲಿ ಕಳಪೆ ಗುಣಮಟ್ಟದ ಉತ್ಪನ್ನಗಳಿದ್ದರೆ ಆಕ್ಷೇಪ ಮಾಡಬಹುದೇ ವಿನಾ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿತು.

ಏಕ ಸದಸ್ಯ ಪೀಠದ ಆದೇಶ ದಂಡ ವಿಧಿಸಿರುವುದು ಅತ್ಯಂತ ಹೆಚ್ಚು ಪ್ರಮಾಣದ್ದಾಗಿದೆ, ಅಲ್ಲದೆ, ಅನ್ಯಾಯದ ಆದೇಶವಾಗಿದೆ. ಜೊತೆಗೆ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 69 ಎ(ಅಂತರ್‌ಜಾಲವದಲ್ಲಿನ ಕೆಲ ಅಂಶಗಳನ್ನು ನಿರ್ಬಂಧಿಸುವುದು)ನ್ನು ರದ್ದುಪಡಿಸಬೇಕು ಎಂದು ಎಕ್ಸ್ ಕಾರ್ಪ ಏಕ ಸದಸ್ಯ ಪೀಠದಲ್ಲಿ ಕೋರಿತ್ತು. ಇದನ್ನು ವಜಾಗೊಳಿಸಿದ್ದ ಏಕ ಸದಸ್ಯ ಪೀಠ 50 ಲಕ್ಷ ರೂ ದಂಡ ವಿಧಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com