ವಾಹನ ಚಾಲಕರಿಗೆ ದುಃಸ್ವಪ್ನವಾದ ಕಗ್ಗದಾಸಪುರ ರೈಲ್ವೇ ಕ್ರಾಸಿಂಗ್!

ಅಧಿಕಾರಶಾಹಿಗಳ ಇಚ್ಛಾಶಕ್ತಿಯ ಕೊರತೆ, ರಾಜಕಾರಣಿಗಳ ಮಧ್ಯಪ್ರವೇಶ, ಮನೆ ಮಾಲೀಕರು ತಮ್ಮ ಭೂಮಿಯನ್ನು ಕಳೆದುಕೊಳ್ಳಲು ಇಚ್ಛಿಸದ ಕಾರಣ ಸಿವಿ ರಾಮನ್ ನಗರದ ಕಗ್ಗದಾಸಪುರದ ರೈಲ್ವೆ ಕ್ರಾಸಿಂಗ್ ಅಲ್ಲಿ ಸಂಚರಿಸುವ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡತೊಡಗಿದೆ.
ವಾಹನ ಚಾಲಕರಿಗೆ ದುಃಸ್ವಪ್ನವಾದ ಕಗ್ಗದಾಸಪುರ ರೈಲ್ವೇ ಕ್ರಾಸಿಂಗ್!
ವಾಹನ ಚಾಲಕರಿಗೆ ದುಃಸ್ವಪ್ನವಾದ ಕಗ್ಗದಾಸಪುರ ರೈಲ್ವೇ ಕ್ರಾಸಿಂಗ್!

ಬೆಂಗಳೂರು: ಅಧಿಕಾರಶಾಹಿಗಳ ಇಚ್ಛಾಶಕ್ತಿಯ ಕೊರತೆ, ರಾಜಕಾರಣಿಗಳ ಮಧ್ಯಪ್ರವೇಶ, ಮನೆ ಮಾಲೀಕರು ತಮ್ಮ ಭೂಮಿಯನ್ನು ಕಳೆದುಕೊಳ್ಳಲು ಇಚ್ಛಿಸದ ಕಾರಣ ಸಿವಿ ರಾಮನ್ ನಗರದ ಕಗ್ಗದಾಸಪುರದ ರೈಲ್ವೆ ಕ್ರಾಸಿಂಗ್ ಅಲ್ಲಿ ಸಂಚರಿಸುವ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡತೊಡಗಿದೆ.

ನೈರುತ್ಯ ರೈಲ್ವೆಯಿಂದ 11 ವರ್ಷಗಳ ಹಿಂದೆಯೇ ಇಲ್ಲಿ ರೋಡ್ ಓವರ್ ಬ್ರಿಡ್ಜ್  ಮಂಜೂರಾಗಿದೆಯಾದರೂ ಕಾಮಗಾರಿ ಮಾತ್ರ ಪ್ರಾರಂಭವಾಗದೆ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳೂ ಕೂಡ ಈ ಬ್ರಿಡ್ಜ್ ನಿರ್ಮಾಣಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಇಲ್ಲಿನ ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

ರೈಲುಗಳು ಹಾದುಹೋಗಲು ಇಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಅನ್ನು ದಿನಕ್ಕೆ ಕನಿಷ್ಠ 14 ಬಾರಿ ಮುಚ್ಚಲಾಗುತ್ತದೆ. ಗೇಟ್‌ನಲ್ಲಿ ನಾಲ್ಕು ರಸ್ತೆಗಳು ಏಕಮುಖವಾಗಿರುವುದರಿಂದ ಮತ್ತು ಶಾಲಾ ಬಸ್‌ಗಳು, ಮೆಟ್ರೊ ಯೋಜನೆಗೆ ನಿರ್ಮಾಣ ವಾಹನಗಳು ಇಲ್ಲಿಯೇ ನಿಲ್ಲುತ್ತವೆ. ಅಲ್ಲದೆ ಕಗ್ಗದಾಸಪುರದ ಬಡಾವಣೆಗಳ ನಿವಾಸಿಗಳ ವಾಹನಗಳ ಸಂಖ್ಯೆಯೂ ಹೆಚ್ಚಿದ್ದು, ಪ್ರತಿ ಗಂಟೆಗೊಮ್ಮೆ ಟ್ರಾಫಿಕ್ ಜಾಮ್ ಸಂಭವಿಸುತ್ತದೆ. ಮಹದೇವಪುರ ಕಡೆಗೆ ಹೋಗುವ ರಸ್ತೆಯಲ್ಲಿ ಕೆಲವೊಮ್ಮೆ 1 ಕಿ.ಮೀ ವರೆಗೆ ಟ್ರಾಫಿಕ್ ಜಾಮ್‌ ವಿಸ್ತರಿಸುತ್ತವೆ. ಬೈಯಪ್ಪನಹಳ್ಳಿ-ಹೊಸೂರು ಮಾರ್ಗವನ್ನು ದ್ವಿಗುಣಗೊಳಿಸಿದಾಗ ಸಮಸ್ಯೆ ತೀವ್ರಗೊಳ್ಳಲಿದೆ ಮತ್ತು ಈ ಭಾಗದಲ್ಲಿ ಹೆಚ್ಚಿನ ರೈಲುಗಳು ಓಡುತ್ತವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ವರದಿಗಾಗಿ TNIE ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದಾಗ, ಇಬ್ಬರು ಪೊಲೀಸರು ಟ್ರಾಫಿಕ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿತ್ತು. ಕಳೆದ 15 ವರ್ಷಗಳಿಂದ ಶಾಲಾ ಬಸ್ ಚಾಲಕ ಎಂ ನಾಗಮಣಿ ಅವರು ಮತ್ತು ಕೆಲವು ಸ್ವಯಂಸೇವಕರು ಟ್ರಾಫಿಕ್ ಕ್ಲಿಯರ್ ಮಾಡಲು ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಕಳೆದಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು, "ಬೆಳಿಗ್ಗೆ 8 ರಿಂದ 11 ಗಂಟೆಯ ನಡುವೆ ಮತ್ತು ಮಧ್ಯಾಹ್ನ 3.30 ರಿಂದ ರಾತ್ರಿ 8 ರ ನಡುವೆ, ಈ ರೈಲ್ವೇಗೇಟ್ ದಾಟಲು 45 ನಿಮಿಷಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಟ್ರಾಫಿಕ್ ಸಮಸ್ಯೆ ಇರುತ್ತದೆ ಎಂದು ಹೇಳಿದ್ದಾರೆ.

ಇನ್ನು ಇಲ್ಲಿ ಬ್ರಿಡ್ಜ್ ಸ್ಥಾಪನೆಗಾಗಿ ಒಟ್ಟು 93 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ, ಆದರೆ ಮನೆ ಮಾಲೀಕರು ಭೂಮಿ ನೀಡಲು ನಿರಾಕರಿಸುತ್ತಿದ್ದಾರೆ ಎಂದು ನಿವಾಸಿಯೊಬ್ಬರು ವಿವರಿಸಿದರು. "ಡಿಆರ್‌ಡಿಒ ತನ್ನ ಸಿಬ್ಬಂದಿಗಾಗಿ ಸೇತುವೆಯನ್ನು ನಿರ್ಮಿಸಿದೆ, ಆದರೆ ಭದ್ರತಾ ಕಾರಣಗಳಿಂದಾಗಿ ಸಾರ್ವಜನಿಕರನ್ನು ನಿರ್ಬಂಧಿಸಿದೆ." 

ಈ ಹಿಂದೆ ವಿಪಕ್ಷದ ಶಾಸಕರಿದ್ದ ಎರಡು ಕ್ಷೇತ್ರಗಳಲ್ಲಿ ಲೆವೆಲ್ ಕ್ರಾಸಿಂಗ್ ಇರುವುದರಿಂದ ಕೆಆರ್ ಪುರಕ್ಕೆ ಬೈರತಿ ಬಸವರಾಜು ಮತ್ತು ಸಿವಿ ರಾಮನ್ ನಗರಕ್ಕೆ ಎಸ್ ರಘು ಅವರು ಯೋಜನೆಗೆ ಒಟ್ಟಾಗಿ ಕೆಲಸ ಮಾಡಲು ನಿರಾಕರಿಸಿದರು ಎಂದು ಮತ್ತೊಬ್ಬ ನಿವಾಸಿ ಆರೋಪಿಸಿದ್ದಾರೆ. "ಈಗ, ಇಬ್ಬರೂ ಶಾಸಕರು ಒಂದೇ ಪಕ್ಷದಲ್ಲಿದ್ದು, ಅವರು ಇನ್ನೂ ನಮಗೆ ಸಹಾಯ ಮಾಡಲು ಕ್ರಮ ಕೈಗೊಂಡಿಲ್ಲ" ಎಂದು ಅವರು ಹೇಳಿದರು.

ರೈಲ್ವೆ ಅಧಿಕಾರಿಯೊಬ್ಬರು ಈ ವಿಚಾರವಾಗಿ ಮಾತನಾಡಿ, “ಭೂಮಿ ನಮ್ಮದಾಗಿರುವುದರಿಂದ ರೈಲ್ವೇಗಳು ಸುಲಭವಾಗಿ ROB ಅನ್ನು ನಿರ್ಮಿಸಬಹುದು. ಆದರೆ ಸಾರ್ವಜನಿಕರಿಗೆ ಪ್ರವೇಶಿಸಲು ಸಾಧ್ಯವಾಗದಿದ್ದರೆ ಅದನ್ನು ನಿರ್ಮಿಸುವುದರಲ್ಲಿ ಅರ್ಥವಿಲ್ಲ. ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನಮಗೆ ಕೊಟ್ಟರೆ ಮಾತ್ರ ನಾವು ಮುಂದುವರಿಯುತ್ತೇವೆ. ಸೇತುವೆಗೆ 2012 ರಲ್ಲಿ ರೂ 31 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿತ್ತು. ಅದು ಈಗ ಬೃಹತ್ ಪ್ರಮಾಣದಲ್ಲಿ ಏರಿರಬೇಕು. ಅದನ್ನೂ ಲೆಕ್ಕಾಚಾರ ಮಾಡಬೇಕಿದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com