ಫೆಡೆಕ್ಸ್ ಕೊರಿಯರ್ ನಲ್ಲಿ ನಿಮ್ಮ ಹೆಸರಿಗೆ ಡ್ರಗ್ಸ್ ಬಂದಿದೆ ಎಂದು ಬೆದರಿಸಿ 1 ಕೋಟಿ ರೂ. ಸುಲಿಗೆ: 8 ಮಂದಿ ವಂಚಕರ ಬಂಧನ

ಪ್ರತಿಷ್ಠಿತ ಫೆಡೆಕ್ಸ್ ಕೊರಿಯರ್ ಕಂಪನಿಗೆ ಮಾದಕ ವಸ್ತು ಪಾರ್ಸೆಲ್ ಬಂದಿದೆ ಎಂದು ಮುಂಬೈ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗ ಕರೆ ಮಾಡಿ ಕೋಟ್ಯಾಂತರ ಹಣ ಸುಲಿಗೆ ಮಾಡುತ್ತಿದ್ದ ಸೈಬರ್ ವಂಚಕರ ಜಾಲವೊಂದನ್ನು ಮಲ್ಲೇಶ್ವರಂ ಪೊಲೀಸರು ಬೇಧಿಸಿದ್ದು, 8 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರತಿಷ್ಠಿತ ಫೆಡೆಕ್ಸ್ ಕೊರಿಯರ್ ಕಂಪನಿಗೆ ಮಾದಕ ವಸ್ತು ಪಾರ್ಸೆಲ್ ಬಂದಿದೆ ಎಂದು ಮುಂಬೈ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗ ಕರೆ ಮಾಡಿ ಕೋಟ್ಯಾಂತರ ಹಣ ಸುಲಿಗೆ ಮಾಡುತ್ತಿದ್ದ ಸೈಬರ್ ವಂಚಕರ ಜಾಲವೊಂದನ್ನು ಮಲ್ಲೇಶ್ವರಂ ಪೊಲೀಸರು ಬೇಧಿಸಿದ್ದು, 8 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳನ್ನು ವಾಸಿಂ ಎನ್ (30), ಹಬೀಬುಲ್ಲಾ ಎಂ (35), ನಿಜಾಮುದ್ದೀನ್ (24), ಮುಶ್ರಫ್ ಖಾನ್ (24), ಬಿ ನೂರುಲ್ಲಾ ಖಾನ್ (53), ಮಹಮ್ಮದ್ ಉಮರ್ (44), ಸೈಯದ್ ಅಹ್ಮದ್ ಅಲಿಯಾಸ್ ಮೌಲಾ ಮತ್ತು ಸೈಯದ್ ಹುಸೇನ್ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಪೊಲೀಸರು 13.17 ಲಕ್ಷ ರೂಪಾಯಿ ನಗದು, 11 ಮೊಬೈಲ್ ಫೋನ್‌ಗಳು, ಚೆಕ್ ಬುಕ್ ಗಳು, ಪಾಸ್ ಬುಕ್ ಗಳು, ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಲ್ಲೇಶ್ವರದ ನಿವೃತ್ತ ಅಧಿಕಾರಿಗೆ, ನ.11ರಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಫೆಡೆಕ್ಸ್ ಕೊರಿಯರ್‌ನಲ್ಲಿ ನಿಮ್ಮ ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರ ವಸ್ತುಗಳು ವಿದೇಶಕ್ಕೆ ಪಾರ್ಸೆಲ್ ಹೋಗುತ್ತಿವೆ. ಅದರಲ್ಲಿ 4 ಅವಧಿ ಮೀರಿದ ಪಾಸ್‌ಪೋರ್ಟ್, 2.35 ಕೆಜಿ ಬಟ್ಟೆಗಳು, 2 ಪೆನ್‌ಡ್ರೈವ್, 1 ಲ್ಯಾಪ್‌ಟಾಪ್, ಕ್ರೆಡಿಟ್ ಕಾರ್ಡ್, ಬ್ಯಾಂಕ್ ದಾಖಲಾತಿಗಳು, 140 ಗ್ರಾಂ ಎಂಡಿಎಂಎ ಮಾದಕ ವಸ್ತುಗಳು ಸಿಕ್ಕಿವೆ. ನಿಮ್ಮ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಆಗಿದ್ದು, ಮನಿ ಲಾರ್ಡಿಂಗ್ ಕೇಸ್ ಸಹ ದಾಖಲಾಗಿದೆ.

ಆದರಿಂದ ನಿಮ್ಮ ಬ್ಯಾಂಕ್ ಸ್ಟೇಟೆಮೆಂಟ್ ಪರಿಶೀಲಿಸಬೇಕು. ತನಿಖೆಗಾಗಿ ಮುಂಗಡವಾಗಿ ನೀವು ಹಣ ನೀಡಬೇಕು. ತನಿಖೆ ಮುಗಿದ ಬಳಿಕ ಆ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುವುದಾಗಿ ಹೇಳಿ ಬ್ಯಾಂಕ್ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಈತನ ಮಾತು ನಂಬಿದ ದೂರುದಾರ, ವಿವಿಧ ಹಂತಗಳಲ್ಲಿ 1.8 ಕೋಟಿ ರೂ. ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.

ಹಣ ಕೈ ಸೇರಿದ ಮೇಲೆ ಆರೋಪಿಗಳು ಸಂಪರ್ಕ ಕಡಿತ ಮಾಡಿಕೊಂಡಿದ್ದರು. ನೊಂದ ಸಂತ್ರಸ್ತ, ಉತ್ತರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದರು. ಮಲ್ಲೇಶ್ವರ ಉಪವಿಭಾಗ ಎಸಿಪಿ ಮೇರಿ ಶೈಲಜ ಮತ್ತು ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಶಿವರತ್ನ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಎಂಟು ಆರೋಪಿಗಳನ್ನು ಬಂಧಿಸಿದೆ.

ಈ  ನಡುವೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫೆಡೆಕ್ಸ್ ತನ್ನ ಗ್ರಾಹಕರಿಗಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಗ್ರಾಹಕರ ಮನವಿಯ ಮೇರೆಗೆ ಹೊರತುಪಡಿಸಿದರೆ ಸರಕುಗಳ ಸಾಗಣೆ ತಡೆಹಿಡಿಯುವ ಅಥವಾ ರದ್ದುಪಡಿಸುವುದನ್ನು ಕಂಪನಿ ಮಾಡುವುದಿಲ್ಲ. ಮೊಬೈಲ್ ಪೋನ್, ಮೇಲ್, ಸಂದೇಶದ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಅನುಮಾನಾಸ್ಪದ ವ್ಯಕ್ತಿಗಳು ದೂರವಾಣಿ ಕರೆ ಅಥವಾ ಸೇದೇಶ ರವಾನಿಸಿದರೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಅನುಮಾನ ಬರುತ್ತಿದ್ದಂತೆಯೇ ಕೂಡಲೇ ಸ್ಥಳೀಯ ಪೊಲೀಸರಿಗೆ, ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com