ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ಪಂದ್ಯ: ಮೆಟ್ರೋ ಸಂಚಾರ ವಿಸ್ತರಣೆ, ಪಾರ್ಕಿಂಗ್ ನಿರ್ಬಂಧ

ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟಿ-20 ಪಂದ್ಯಾವಳಿಯ 5ನೇ ಪಂದ್ಯವು ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮೆಟ್ರೋ ಸಂಚಾರ ಸೌಲಭ್ಯವನ್ನು ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟಿ-20 ಪಂದ್ಯಾವಳಿಯ 5ನೇ ಪಂದ್ಯವು ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮೆಟ್ರೋ ಸಂಚಾರ ಸೌಲಭ್ಯವನ್ನು ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ.

ಡಿ. 3ರಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿರುವ ನಾಲ್ಕು ಟರ್ಮಿನಲ್‌ ಮೆಟ್ರೋ ನಿಲ್ದಾಣಗಳಿಂದ ಹೊರಡುವ ರೈಲು ಸೇವೆಗಳನ್ನು ರಾತ್ರಿ 11.45 ರವರೆಗೆ ವಿಸ್ತರಿಸಲಾಗಿದೆ” ಎಂದು ಹೇಳಿದೆ.

ಜತೆಗೆ, ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಡಿ. 3ರಂದು ಮಧ್ಯಾಹ್ನ 2 ಗಂಟೆಯಿಂದ ಮಾರಾಟಕ್ಕೆ ಲಭ್ಯವಿದೆ. ಪೇಪರ್ ಟಿಕೆಟ್‌ಗಳು ರಾತ್ರಿ 8 ಗಂಟೆಯಿಂದ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ದಿನದ ವಿಸ್ತೃತ ಅವಧಿಯಲ್ಲಿ ಒಂದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ” ಎಂದು ತಿಳಿಸಿದೆ.

ಪೇಪರ್ ಟಿಕೆಟ್ ದರ ರೂ.50 ಇರಲಿದೆ. ಜೊತೆಗೆ, ಕ್ಯೂಆರ್ ಕೋಡ್ ಟಿಕೆಟ್‌ಗಳು ಸಾಮಾನ್ಯ ದರದ ಶೇ.5 ರಿಯಾಯಿತಿಯೊಂದಿಗೆ ಪಂದ್ಯದ ದಿನದಂದು ಖರೀದಿಸಿದರೆ ಇಡೀ ದಿನಕ್ಕೆ ಮಾನ್ಯವಾಗಿರುತ್ತದೆ. ಅನುಕೂಲಕರ ಪ್ರಯಾಣಕ್ಕೆ, ಕ್ರಿಕೆಟ್ ಪಂದ್ಯದ ಪ್ರಾರಂಭದ ಮೊದಲು ವಾಟ್ಸ್‌ ಆಪ್, ನಮ್ಮ ಮೆಟ್ರೋ ಆಪ್ ಅಥವಾ ಪೇಟಿಎಂ ಆಪ್‌ನಲ್ಲಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಮತ್ತು ಎನ್‌ಸಿಎಮ್‌ಸಿ ಕಾರ್ಡ್‌ಗಳನ್ನು ಸಹ ಎಂದಿನಂತೆ ಬಳಸಬಹುದು” ಎಂದು ಮಾಹಿತಿ ನೀಡಿದೆ.

ವಿಸ್ತೃತ ಸಮಯದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಪೇಪರ್ ಟಿಕೆಟ್‌ಗಳನ್ನು ಮಾತ್ರ ಅನುಮತಿಸಲಾಗಿದೆ ಎಂದು ತಿಳಿಸಿದೆ.

ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿ ಜನಸಂದಣಿಯನ್ನು ತಪ್ಪಿಸಲು, ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಗಳ ಸಂಚಾರ
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ‌ಅನುಕೂಲಕ್ಕಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಚ್ಚಿನ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಚ್‌ಎಎಲ್‌ ರಸ್ತೆ ಮೂಲಕ ಕಾಡುಗೋಡಿ, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣ, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಅಗರ, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊಸೂರ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್‌ ಸಿಟಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಜಯದೇವ ಆಸ್ಪತ್ರೆ ಮೂಲಕ ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಂಸಿಟಿಸಿ ನಾಯಂಡನಹಳ್ಳಿ ಮಾರ್ಗವಾಗಿ ಕೆಂಗೇರಿ ಕೆಎಚ್‌ಬಿ ಕಾಲೋನಿ, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಮಾರ್ಗವಾಗಿ ಜನಪ್ರಿಯ ಟೌನ್‌ಶಿಪ್‌, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಯಶವಂತಪುರ ಮಾರ್ಗವಾಗಿ ನೆಲಮಂಗಲಕ್ಕೆ ಬಸ್‌ ವ್ಯವಸ್ಥೆ ಮಾಡಲಾಗಿರುತ್ತದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಬ್ಬಾಳ ಮಾರ್ಗವಾಗಿ ಯಲಹಂಕ 5ನೇ ಹಂತ, ನಾಗವಾರ, ಟ್ಯಾನರಿ ರಸ್ತೆ ಮೂಲಕ ಆರ್‌ಕೆ ಹೆಗಡೆ ನಗರ ಯಲಹಂಕ, ಹೆಣ್ಣೂರು ರಸ್ತೆ ಮಾರ್ಗವಾಗಿ ಬಾಗಲೂರು, ಟಿನ್‌ ಫ್ಯಾಕ್ಟರಿ ಮಾರ್ಗವಾಗಿ ಹೊಸಕೋಟೆಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಾರ್ಕಿಂಗ್‌ ನಿಷೇಧ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಟಿ20 ಕ್ರಿಕೆಟ್‌ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಕ್ರೀಡಾಂಗಣದ ಸುತ್ತ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಿದ್ದಾರೆ.

ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಎಂಜಿ ರಸ್ತೆಯ ಎರಡೂ ಬದಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ, ಸಿಟಿಒ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರಾಜಭವನ ರಸ್ತೆ, ಸಿಟಿಒ ವೃತ್ತದಿಂದ ಡಿಕನ್ಸನ್ ರಸ್ತೆ ಜಂಕ್ಷನ್‌ವರೆಗೆ ಕಬ್ಬನ್ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ಸೆಂಟ್ರಲ್ ಸ್ಟ್ರೀಟ್, ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಮಂಡ್ ವೃತ್ತದವರೆಗೆ ಮಲ್ಲಯ್ಯ ರಸ್ತೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ವೃತ್ತದವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಕಿಂಗ್ಸ್ ರಸ್ತೆ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ ಮತ್ತು ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಶಿವಾಜಿನಗರದಲ್ಲಿ ಪೇ ಮತ್ತು ಪಾರ್ಕ್ ತಾಣಗಳು ಲಭ್ಯವಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com