ಪತಿ ಮೇಲೆ ಸೇಡು: ಪೊಲೀಸರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮಹಿಳೆಯ ವಿರುದ್ಧ ಎಫ್ಐಆರ್

ಪತಿ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆತನ ಮೊಬೈಲ್ ಸಂಖ್ಯೆಯಿಂದ ಪೊಲೀಸ್ ಅಧಿಕಾರಿಗೆ ಹುಸಿ ಬೆದರಿಕೆ ಸಂದೇಶ ಕಳುಹಿಸಿದ 32 ವರ್ಷದ ಮಹಿಳೆಯ ವಿರುದ್ಧ ನಗರ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪತಿ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆತನ ಮೊಬೈಲ್ ಸಂಖ್ಯೆಯಿಂದ ಪೊಲೀಸ್ ಅಧಿಕಾರಿಗೆ ಹುಸಿ ಬೆದರಿಕೆ ಸಂದೇಶ ಕಳುಹಿಸಿದ 32 ವರ್ಷದ ಮಹಿಳೆಯ ವಿರುದ್ಧ ನಗರ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮಹಿಳೆ ವಿದ್ಯಾರಾಣಿ ಆನ್‌ಲೈನ್‌ನಲ್ಲಿ ಪರಪುರುಷನ ಜೊತೆ ಸ್ನೇಹ ಬೆಳೆಸಿರುವುದನ್ನು ಕಂಡ ಪತಿ ಕಿರಣ್ ಆಕೆಯ ಮೊಬೈನ್ ಅನ್ನು ಹೊಡೆದು ಹಾಕಿದ್ದರು. ಇದು ಮಹಿಳೆ ಕೆರಳುವಂತೆ ಮಾಡಿತ್ತು. ನಂತರ ಮತ್ತೊಂದು ಮೊಬೈಲ್ ಖರೀದಿಸಿದ್ದ ವಿದ್ಯಾರಾಣಿ ತಾನು ಸಿಕ್ಕಿಬಿದ್ದಿದ್ದಾಗಿ ತನ್ನ ಬಿಹಾರ ಮೂಲದ ಸ್ನೇಹಿತ ರಾಮಪ್ರಸಾದ್ ಗೆ ತಿಳಿಸಿದ್ದಾಳೆ. ಇವರಿಬ್ಬರೂ ಸೇರಿ ಕಿರಣ್ ನನ್ನು ಸಿಲುಕಿಸುವ ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.

ನಂತರ ಮಹಿಳೆ ಕಿರಣ್ ಮೊಬೈಲ್ ನಿಂದ ಡಿಸೆಂಬರ್ 3ರಂದು ಹಿರಿಯ ಪೊಲೀಸ್ ಅಧಿಕಾರಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು ಅದರಲ್ಲಿ ಸರಣಿ ಆರ್‌ಡಿಎಕ್ಸ್ ಬಾಂಬ್ ಸ್ಫೋಟ ನಡೆಯಲಿದೆ ಎಂದು ಹೇಳಿದ್ದಳು. ಸಂದೇಶ ರವಾನೆಯಾದ ನಂತರ ವಿದ್ಯಾರಾಣಿ ಮೊಬೈಲ್ ನಲ್ಲಿದ್ದ ಸಂದೇಶವನ್ನು ಡಿಲೀಟ್ ಮಾಡಿದ್ದಾಳೆ.

ಮೊಬೈಲ್ ಸಂಖ್ಯೆ ಪರಿಶೀಲಿಸಿದ ಪೊಲೀಸರು ನಂತರ ಕಿರಣ್ ನನ್ನು ವಿಚಾರಣೆಗೆ ಒಳಪಡಿಸಿದ್ದರು. ನಂತರ ಅನುಮಾನಗೊಂಡು ವಿದ್ಯಾರಾಣಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಗೆ ಬಂದಿದೆ. ಗಂಡ ತನ್ನ ಮೊಬೈಲ್ ಅನ್ನು ಒಡೆದಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಬೆದರಿಕೆ ಸಂದೇಶವನ್ನು ಕಳುಹಿಸಿದ ಆರೋಪದ ಮೇಲೆ ವಿದ್ಯಾರಾಣಿ ಮತ್ತು ಆಕೆಯ ಸಹಚರ ರಾಮಪ್ರಸಾದ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com