ಅಪಾಯಕಾರಿ ಮರಗಳ ತೆರವುಗೊಳಿಸುವಲ್ಲಿ ಮಾರ್ಗಸೂಚಿ ಪಾಲನೆ; ಹೈಕೋರ್ಟ್​ಗೆ ಬಿಬಿಎಂಪಿ ಮಾಹಿತಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನದಡಿಯಲ್ಲಿ (ಎಸ್‌ಒಪಿ) ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅಧಿಕಾರಿಗಳು ಅವುಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನದಡಿಯಲ್ಲಿ (ಎಸ್‌ಒಪಿ) ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅಧಿಕಾರಿಗಳು ಅವುಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ.

ಮನೆಯ ಪಕ್ಕದ ಮರ ಬೀಳುವ ಸ್ಥಿತಿಯಲ್ಲಿದ್ದು ಅದನ್ನು ತೆರವುಗೊಳಿಸುತ್ತಿಲ್ಲ ಎಂದು ಕೋರಿ ಬೆಂಗಳೂರಿನ ಡಾ. ವಿ ಎಲ್ ನಂದೀಶ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠಕ್ಕೆ ಬಿಬಿಎಂಪಿ ಈ ಮಾಹಿತಿ ನೀಡಿದೆ.

ಬಿಬಿಎಂಪಿ ಪರ ವಕೀಲರು ನೀಡಿದ ಮಾಹಿತಿ ದಾಖಲಿಸಿಕೊಂಡ ನ್ಯಾಯಪೀಠ, ಪಾಲಿಕೆ ಎಸ್‌ಒಪಿ ಪಾಲನೆ ಮಾಡುತ್ತಿರುವುದಾಗಿ ಹೇಳಿದೆ. ಹಾಗಾಗಿ ನ್ಯಾಯಾಲಯ ಎಸ್​ಒಪಿ ಸಿಂಧುತ್ವದ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸದೆ ಅರ್ಜಿಯನ್ನು ವಿಲೇವಾರಿ ಮಾಡುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಈ ವ್ಯಾಜ್ಯದ ಮೂಲ ಕಾರಣ ಒಂದು ಅಪಾಯಕಾರಿ ಮರ, ಪಾಲಿಕೆ ನ್ಯಾಯಾಲಯದ ಸೂಚನೆಯಂತೆ ಈಗಾಗಲೇ ಆ ಮರವನ್ನು ತೆರವುಗೊಳಿಸಿದೆ. ಹಾಗಾಗಿ ಅರ್ಜಿಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣ ಸಂಬಂಧ ನ್ಯಾಯಾಲಯ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ ಪಾಲಿಕೆ ಮೊದಲಿಗೆ, ಭೂಮಿಯ ಮಾಲೀಕರಿಗೆ ಮಾತ್ರ ಮರವನ್ನು ತೆರವುಗೊಳಿಸಲು ಅನುಮತಿ ನೀಡಲಾಗುವುದು, ಪಕ್ಕದ ಮಾಲೀಕರಿಗೆ ಅನುಮತಿ ನೀಡಲಾಗದು ಎಂದು ಹೇಳಿತ್ತು. ಆದರೆ ನ್ಯಾಯಾಲಯ, ಮರ ಇರುವ ನಿವೇಶನದ ಮಾಲೀಕರು ಮರವನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ಅದರಿಂದ ನೆರೆಯ ಮಾಲೀಕರಿಗೆ ತೊಂದರೆ ಆಗುತ್ತಿದೆ. ಅವರ ದೃಷ್ಟಿಯಿಂದ ಪಾಲಿಕೆ ಸ್ಥಳ ಪರಿಶೀಲನೆ ನಡೆಸಿ, ಮರವನ್ನು ತೆರವುಗೊಳಿಸುವ ಬಗ್ಗೆ ತೀರ್ಮಾನಿಸಬಹುದು ಎಂದು ಆದೇಶಿಸಿತ್ತು.

ಅದರಂತೆ ಪಾಲಿಕೆ ಸ್ಥಳ ಪರಿಶೀಲನೆ ನಡೆಸಿ, ಮರವನ್ನು ತೆರವುಗೊಳಿಸಿತು, ಅದಕ್ಕೆ ತಗುಲಿದ ವೆಚ್ಚವನ್ನು ಮರ ಇದ್ದ ನಿವೇಶನದ ಮಾಲೀಕರಿಂದ ವಸೂಲು ಮಾಡಲಾಗಿದೆ ಎಂದು ಬಿಬಿಎಂಪಿ ನ್ಯಾಯಾಲಯಕ್ಕೆ ತಿಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರ ಮನೆಗೆ ಹೊಂದಿಕೊಂಡಂತೆ ಪಕ್ಕದಲ್ಲಿರುವ ನಿವೇಶನದಲ್ಲಿ ಮರ ಇದೆ. ಅದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಆ ಮರವನ್ನು ತೆರವುಗೊಳಿಸಬೇಕಾಗಿದೆ. ಆ ಬಗ್ಗೆ ನಿವೇಶನದ ಮಾಲೀಕರಿಗೆ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಮರದಿಂದ ಜೀವ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಒಂದು ಮರವನ್ನು ತೆರವುಗೊಳಿಸಲು ಅನುಮತಿ ನೀಡಬೇಕು, ಇಲ್ಲವೇ ನೆರೆಯವರಿಗೆ ಮರವನ್ನು ತೆರವುಗೊಳಿಸಲು ಆದೇಶ ನೀಡಬೇಕು ಎಂದು ಕೋರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com