ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿ ಕಾಮಗಾರಿ ತನಿಖೆಗೆ ವಿಶೇಷ ಘಟಕ ರಚನೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಆಡಳಿತವಿದ್ದಾಗ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಲಾಗಿರುವ ಕಾಮಗಾರಿಗಳಲ್ಲಿನ ಅಕ್ರಮದ ತನಿಖೆ ನಡೆಸಲು ರಾಜ್ಯ ಸರ್ಕಾರವು ವಿಶೇಷ ತನಿಖಾ ಘಟಕ ರಚಿಸಿದ್ದ ಆದೇಶಕ್ಕೆ ಈಚೆಗೆ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಆಡಳಿತವಿದ್ದಾಗ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಲಾಗಿರುವ ಕಾಮಗಾರಿಗಳಲ್ಲಿನ ಅಕ್ರಮದ ತನಿಖೆ ನಡೆಸಲು ರಾಜ್ಯ ಸರ್ಕಾರವು ವಿಶೇಷ ತನಿಖಾ ಘಟಕ ರಚಿಸಿದ್ದ ಆದೇಶಕ್ಕೆ ಈಚೆಗೆ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ.

ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್’ ಸೇರಿದಂತೆ 17 ಗುತ್ತಿಗೆ ಕಂಪನಿಗಳು ಮತ್ತು 28 ಮಂದಿ ಗುತ್ತಿಗೆದಾರರು 2023ರ ಆಗಸ್ಟ್‌ 4ರಂದು ವಿಶೇಷ ತನಿಖಾ ದಳ ರಚಿಸಿ ನಗರಾಭಿವೃದ್ಧಿ ಇಲಾಖೆ ಮಾಡಿದ್ದ ಆದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಭಿನ್ನ ನಿಲುವು ತಳೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆಕ್ಷೇಪಾರ್ಹ ಆದೇಶ ಅಥವಾ ಏಕಸದಸ್ಯ ತನಿಖಾ ಆಯೋಗ ರಚನೆ ಮಾಡಿರುವ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳುವವರೆಗೆ ಮುಂದಿನ ಪ್ರಕ್ರಿಯೆಗಳಿಗೆ ತಡೆ ವಿಧಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿಕೊಂಡಿದೆ.

“ವಿವಿಧ ಕಾಮಗಾರಿಗಳ ತನಿಖೆಗೆ ವಿಶೇಷ ತನಿಖಾ ದಳ ರಚಿಸಿದ್ದು, ಅದು ಒಂದು ತಿಂಗಳ ಗಡುವಿನೊಳಗೆ ತನ್ನ ಕಾರ್ಯವನ್ನು ಏಕೆ ಪೂರ್ಣಗೊಳಿಸಿಲ್ಲ” ಎಂದು ಹೈಕೋರ್ಟ್ ಸರ್ಕಾರದಿಂದ ವಿವರಣೆ ಕೇಳಿದೆ.

ವಿಶೇಷ ದಳವನ್ನು ರಚಿಸುವ ಆಗಸ್ಟ್ 5ರ ಸರ್ಕಾರದ ಅಧಿಸೂಚನೆಗೆ ಸಂಬಂಧಿಸಿದ ಮುಂದಿನ ತನಿಖಾ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದು ಎಂದು ಹೈಕೋರ್ಟ್​ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು, “2019-20 ರಿಂದ 2022-23ರವರೆಗೆ ನಡೆದಿರುವ ಕಾಮಗಾರಿಗಳ ತನಿಖೆಗೆ ವಿಶೇಷ ತನಿಖಾ ಘಟಕ ಆರಂಭಿಸಲಾಗಿದೆ” ಎಂದು ಆಕ್ಷೇಪಿಸಿದ್ದರು.

ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು, ವಿಚಾರಣೆಯನ್ನು ಡಿಸೆಂಬರ್‌ 19ಕ್ಕೆ ಮುಂದೂಡಿದೆ.

ಏನಿದು ಪ್ರಕರಣ?
ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಿಂದ 2023ರ ಮೇ ತಿಂಗಳ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನ, ನಗರೋತ್ಥಾನ ಅನುದಾನ ಮತ್ತು ಬಿಬಿಎಂಪಿ ಅನುದಾನಗಳ ಅಡಿಯಲ್ಲಿ ಹಲವು ಕಾಮಗಾರಿ ನಡೆಸಲಾಗಿದೆ. ಕಾಮಗಾರಿಗಳ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್‌ ಪಾವತಿ, ಕಳಪೆ ಗುಣಮಟ್ಟ ಕಾಮಗಾರಿ ನಡೆಸಿರುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು.

ಗುತ್ತಿಗೆದಾರರ ಸಂಘ ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವನ್ನು ರಚನೆ ಮಾಡಿ, ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com