

ಉಡುಪಿ: ಸಮಾಜ ಸೇವಕ, ರಾಜಕೀಯ ಮುಖಂಡ, ನಾಟಕಕಾರ ಕಾಪು ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ (59) ದಂಪತಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗುತ್ತಿದೆ.
ಉಡುಪಿಯ ಕಾಪುವಿನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ದಂಪತಿಯ ಶವಗಳು ಕಾಪು ಪೇಟೆಯಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವರಿಬ್ಬರು ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಲೀಲಾಧರ ಶೆಟ್ಟಿಯವರು ಕಾಪುವಿನಲ್ಲಿ ರಂಗ ತರಂಗ ಎಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಸದಾ ಸಮಾಜಪರ ಕಾಳಜಿ ಹೊಂದಿದ್ದ ಅವರು ಯಾವುದೇ ಕ್ಷಣದಲ್ಲಿ ಕೂಡ ಅಶಕ್ತರ ನೆರವಿಗೆ ಧಾವಿಸುತ್ತಿದ್ದರು. ಇವರು ಒಂದು ಬಾರಿ ಕಾಪು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಅವರು ಲೀಲಣ್ಣ ಎಂದು ಜನಪ್ರಿಯರಾಗಿದ್ದರು. ಆದರೂ ಇತ್ತೀಚೆಗೆ ಹಣಕಾಸಿನ ತೊಂದರೆ ಕೂಡ ಹೊಂದಿದ್ದರು ಎನ್ನಲಾಗಿದೆ.
ಕೌಟುಂಬಿಕ ಕಾರಣದಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.