ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ: ವಿಧಾನಸೌಧ ಭದ್ರತಾ ಹೊಣೆ ಪೊಲೀಸರಿಗೆ ನೀಡಲು ಚಿಂತನೆ!

ಸಂಸತ್‌ ಭವನದಲ್ಲಿ ಕಿಡಿಗೇಡಿಗಳು ಹೊಗೆ ಬಣ್ಣಮಿಶ್ರಿತ ಹೊಗೆ ದಾಳಿ ನಡೆಸಿದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿಧಾನಸೌಧದ ಭದ್ರತೆಯ ಹೊಣೆಯನ್ನು ಪೊಲೀಸರಿಗೆ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಂಸತ್‌ ಭವನದಲ್ಲಿ ಕಿಡಿಗೇಡಿಗಳು ಹೊಗೆ ಬಣ್ಣಮಿಶ್ರಿತ ಹೊಗೆ ದಾಳಿ ನಡೆಸಿದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿಧಾನಸೌಧದ ಭದ್ರತೆಯ ಹೊಣೆಯನ್ನು ಪೊಲೀಸರಿಗೆ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ವಿಧಾನಸೌಧ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಹಲವಾರು ಇಲಾಖೆಗಳು ಹೊತ್ತಿಕೊಂಡಿವೆ. ಆದರೆ, ಭದ್ರತಾ ವೈಫಲ್ಯಗಳು ಎದುರಾಗಿದ್ದೇ ಆದರೆ, ಹೊಣೆಗಾರಿಕೆಯನ್ನು ನಿರ್ದಿಷ್ಟ ಇಲಾಖೆಯ ಮೇಲೆ ಹೊರಿಸಲು ಸಾಧ್ಯವಾಗುವಿದಿಲ್ಲ. ಹೀಗಾಗಿ ಅಧಿವೇಶನಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ ಶಾಸಕರು ಮತ್ತು ವಿಧಾನಸೌಧಕ್ಕೆ ಭೇಟಿ ನೀಡುವವರ ಸುರಕ್ಷತೆಯ ಜವಾಬ್ದಾರಿ ಪೊಲೀಸರ ಮೇಲೆ ಇದೆ. ಹೀಗಾಗಿ ವಿಧಾನಸೌಧದ ಭದ್ರತೆಯ ಹೊಣೆಯನ್ನು ಪೊಲೀಸರಿಗೇ ನೀಡುವ ಕುರಿತು ಚಿಂತನೆಗಳು ನಡೆಯುತ್ತಿವೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಹೇಳಿದ್ದಾರೆ.

ವಿಧಾನಸೌಧ ಹಾಗೂ ಸುತ್ತಮುತ್ತ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದೆ. ಇಂತಹ ಕ್ಯಾಮೆರಾಗಳನ್ನು ಅಳವಡಿಸಲು 10-12 ಏಜೆನ್ಸಿಗಳು ಮುಂದೆ ಬಂದಿವೆ. ಶೀಘ್ರದಲ್ಲೇ ಪೊಲೀಸ್ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ವಿಧಾನಸೌಧದ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ನೀಡಲಾಗುತ್ತದೆ. ಪೊಲೀಸರು ವಿಧಾನಸೌಧದಲ್ಲಿ ಅಳವಡಿಸಲಾಗುವ ಹೈಟೆಕ್ ಸೆಕ್ಯುರಿಟಿ ಗ್ಯಾಜೆಟ್‌ಗಳ ಮೇಲೆ ನಿಗಾ ಇಡುತ್ತಾರೆಂದು ತಿಳಿಸಿದ್ದಾರೆ.

ಇದಲ್ಲದೆ, ಸಂದರ್ಶಕರಿಗೆ ನೀಡುವ ಪಾಸ್‌ಗಳಿಗೆ ಅಂತಿಮ ಅನುಮೋದನೆ ನೀಡುವ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಲಾಗುವುದು. ಇದು ಸುರಕ್ಷತೆಯ ವಿಷಯವಾಗಿದ್ದು, ಪೊಲೀಸರಿಗೆ ಇದರ ಜವಾಬ್ದಾರಿಯನ್ನು ನೀಡಲಾಗುವುದು ಎಂದರು.

ಇತ್ತೀಚೆಗೆ ವಿಧಾನಸೌಧದ ಸಿಸಿಟಿವಿ ಕ್ಯಾಮೆರಾಗಳು, ಮೆಟಲ್ ಡಿಟೆಕ್ಟರ್‌ಗಳು ಮತ್ತು ಇತರ ಭದ್ರತಾ ಗ್ಯಾಜೆಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಬಜೆಟ್ ಅಧಿವೇಶನದ ವೇಳೆ ವಿಧಾನಸೌಧದ ಒಳಗೆ ಅಪರಿಚಿತ ವ್ಯಕ್ತಿಯೊಬ್ಬ ಜೆಡಿಎಸ್ ಶಾಸಕರಿಗೆ ನೀಡಲಾಗಿದ್ದ ಆಸನವೊಂದರಲ್ಲಿ ಕುಳಿತುಕೊಂಡಿರುವುದು ಕಂಡು ಬಂದಿತ್ತು. ಈ ನಡುವಲ್ಲೇ ಸಂಸತ್ತಿನಲ್ಲಿ ಭದ್ರತಾ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಿಧಾನಸೌಧದಲ್ಲಿ ಭದ್ರತೆ ಹೆಚ್ಚಿಸಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com