ಬ್ಯಾನರ್ ತೆಗೆಯಿರಿ, ಇಲ್ಲವೇ ಕ್ರಿಮಿನಲ್ ಕೇಸ್ ಎದುರಿಸಿ: ರಾಜಕೀಯ ಮುಖಂಡರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ
ಬೆಂಗಳೂರು: ನಗರದಲ್ಲಿ ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳ ಹಾವಳಿ ಅವ್ಯಾಹತವಾಗಿ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತುಷಾರ್ ಗಿರಿನಾಥ್ ಅವರು, ಈ ವಾರಾಂತ್ಯದ ವೇಳೆಗೆ ಕನಿಷ್ಟ 10 ಎಫ್ಐಆರ್ ದಾಖಲಿಸುವಂತೆ ಪ್ರತಿ ವಲಯದ ಸಹಾಯಕ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಮತ್ತು ಅವರ ಬೆಂಬಲಿಗರು ಈಗಾಗಲೇ ಬ್ಯಾನರ್‌ಗಳಿಂದ ನಗರವನ್ನು ವಿರೂಪಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಫ್ಲೆಕ್ಸ್, ಬ್ಯಾನರ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಅಕ್ರಮ ಬ್ಯಾನರ್ ಮತ್ತು ಪೋಸ್ಟರ್ ಗಳಿಗೆ ಸಂಬಂಧಿಸಿದಂತೆ ವಲಯವಾರು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಆಯಾ ವಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಂತೆ ತ್ವರಿತವಾಗಿ ಬ್ಯಾನರ್ ಗಳನ್ನು ತೆಗೆಯುತ್ತಿದ್ದಾರೆ. ಆದರೆ, ಅದರಿಂದ ಅಷ್ಟು ಪರಿಣಾಮವಾಗುತ್ತಿಲ್ಲ ಎಂಬುದು ನಮಗೆ ತಿಳಿದಿದೆ. ಹೀಗಾಗಿ ವಲಯವಾರು ಕನಿಷ್ಠ 10 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗಿರಿನಾಥ್ ಅವರು ಹೇಳಿದ್ದಾರೆ.
ದಕ್ಷಿಣ, ಪೂರ್ವ, ಯಲಹಂಕ ಮತ್ತು ಬೊಮ್ಮನಹಳ್ಳಿ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಚು ಎಂಟು ವಲಯಗಳಿದ್ದು, ಎಲ್ಲಾ ವಲಯಗಳಲ್ಲಿ ಹತ್ತು ಪ್ರಕರಣಗಳು ದಾಖಲಾದರೂ, 80 ಪ್ರಕರಣಗಳು ದಾಖಲಾದಂತಾಗುತ್ತದೆ.
ಪಾಲಿಕೆ ಅಧಿಕಾರಿಗಳು ಮಾತನಾಡಿ, ಈ ಕ್ರಮವು ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ಎಚ್ಚರಿಕೆಯನ್ನು ರವಾನಿಸಲಿದ್ದು, ಹೈಕೋರ್ಟ್ ನಿರ್ದೇಶನವನ್ನು ಅನುಸರಿಸುವಂತೆ ಹಾಗೂ ಬಿಬಿಎಂಪಿ ಕಾಯ್ದೆಯ ಬಗ್ಗೆ ತಿಳಿದುಕೊಳ್ಳುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.


