ಗಡುವು ಮುಗಿಯಿತು, ಹೊಸ ವರ್ಷವೂ ಆರಂಭವಾಯಿತು ಇನ್ನೂ ಮುಕ್ತಿ ಕಾಣದ ನಗರದ ರಸ್ತೆ ಗುಂಡಿಗಳು: ಮಾತಿಗೆ ತಪ್ಪಿದ ಬಿಬಿಎಂಪಿ

ಡಿಸೆಂಬರ್ 31 2022ರೊಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಹೇಳಿದ್ದ ಬಿಬಿಎಂಪಿ, ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡಿಸೆಂಬರ್ 31 2022ರೊಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಹೇಳಿದ್ದ ಬಿಬಿಎಂಪಿ, ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ.

ಡಿಸೆಂಬರ್ 31 ಮುಗಿದು, ಹೊಸ ವರ್ಷ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ನಗರದ ಹಲವು ರಸ್ತೆಗಳಲ್ಲಿ ಇನ್ನೂ ರಸ್ತೆಗಳನ್ನು ಮುಚ್ಚಲಾಗಿಲ್ಲ.

ಗುಂಡಿಗಳನ್ನು ಪತ್ತೆ ಹಚ್ಚಲು ಮತ್ತು ಅವುಗಳನ್ನು ಸರಿಪಡಿಸಲು ಬಳಸುವ ‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ ಅನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಹಿಂದೆ ಜನವರಿ ಆರಂಭದಲ್ಲಿ ಕಾರ್ಯವಿಧಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದರು.

ಇಂಜಿನಿಯರ್-ಇನ್-ಚೀಫ್ ಬಿಎಸ್ ಪ್ರಹ್ಲಾದ್ ಮಾತನಾಡಿ, ಆ್ಯಪ್'ನ್ನು ಆದಷ್ಟು ಬೇಗ ಸಾರ್ವಜನಿಕಗೊಳಿಸಲಾಗುವುದು. ನಾವು ಬೆಂಗಳೂರಿನ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಸರಿಪಡಿಸಿದ್ದೇವೆ. ಆದರೂ ಹಲವು ವಾರ್ಡ್ ಗಳು ಹಾಗೂ ಅಡ್ಡರಸ್ತೆಗಳಲ್ಲಿ ಸಮಸ್ಯೆಗಳಿವೆ. ಅದನ್ನೂ ಹಂತ ಹಂತದಲ್ಲಿ ತುಂಬಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಫಿಕ್ಸ್ ಮೈ ಸ್ಟ್ರೀಟ್ ಅಪ್ಲಿಕೇಶನ್ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ, ಡಿಸೆಂಬರ್ 31 ರೊಳಗೆ ನಗರವನ್ನು ಗುಂಡಿಗಳಿಂದ ಮುಕ್ತಗೊಳಿಸುವುದಾಗಿ ಬಿಬಿಎಂಪಿ ಘೋಷಿಸಿತು ಮತ್ತು ದೂರುಗಳನ್ನು ಆಹ್ವಾನಿಸಲು, ಅವುಗಳನ್ನು ಸರಿಪಡಿಸಲು ಅಪ್ಲಿಕೇಶನ್ ಮೂಲಕ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿತ್ತು.

ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬಿಬಿಎಂಪಿ ವಿಫಲವಾಗಿರುವುದರಿಂದ ಮೂಲಸೌಕರ್ಯ ತಜ್ಞರು ಹಾಗೂ ಕಾರ್ಯಕರ್ತರು ಪಾಲಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಸ್ತೆ ಮೂಲಸೌಕರ್ಯ ತಜ್ಞ ಎಂ.ಎನ್.ಶ್ರೀಹರಿ ಮಾತನಾಡಿ, ಬಿಬಿಎಂಪಿ ಏನೇ ಹೇಳಿದರೂ ಅದರಲ್ಲಿ ಪಾವಿತ್ರ್ಯತೆ ಇಲ್ಲ. ಬಿಬಿಎಂಪಿ ನಗರದಲ್ಲಿ ಗುಂಡಿಗಳ ಸಂಖ್ಯೆ ಬಗ್ಗೆ ಮಾತನಾಡುವ ಬದಲು, ಅದರಿಂದ ಹೊರಗೆ ಬಂದು ಗುಂಡಿಗಳಿಲ್ಲ ಎಂದು ಹೇಳಬೇಕು. ಸಾರ್ವಜನಿಕರು ಗುಂಡಿಗಳನ್ನು ಗುರುತಿಸಿದರೆ ಅವರಿಗೆ ಬಹುಮಾನವನ್ನು ನೀಡಬೇಕು. ಗುತ್ತಿಗೆದಾರ ಮತ್ತು ಬಿಬಿಎಂಪಿ ಎಂಜಿನಿಯರ್ ಮೇಲ್ವಿಚಾರಣಾ ಕೆಲಸದ ವಿವರಗಳನ್ನು ಕೂಡ ಹಾಕಬೇಕು. ಮೂರು ವರ್ಷಗಳವರಗೆ ಆದರೂ ಅದೇ ಸ್ಥಳದಲ್ಲಿ ಗುಂಡಿಗಳು ಮತ್ತೆ ಕಾಣಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಫಿಕ್ಸ್ ಮೈ ಸ್ಟ್ರೀಟ್ ಅಪ್ಲಿಕೇಶನ್‌ ಪುನರಾರಂಭ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಬಿಬಿಎಂಪಿಯ ಮತ್ತೊಂದು ನಾಟಕವಾಗಿದೆ ಎಂದು ತಿಳಿಸಿದ್ದಾರೆ.

ಜನಾಗ್ರಹದ ಸಿವಿಕ್ ಪಾರ್ಟಿಸಿಪೇಷನ್‌ನ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, ಬಿಬಿಎಂಪಿ ಅಳವಡಿಸಿರುವ ತಂತ್ರಜ್ಞಾನ ಅಗತ್ಯವಾಗಿದೆ. ಆದರೆ, ಅದಷ್ಟೇ ಸಾಕಾಗುವುದಿಲ್ಲ. ವಾರ್ಡ್ ಸಮಿತಿಗೆ ಅಧಿಕಾರ ದೊರೆತಾಗ ಮಾತ್ರ ಗುಂಡಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com