
ಬೆಂಗಳೂರು: ಇತ್ತೀಚೆಗೆ ಆರ್‌ಆರ್‌ನಗರ ವಲಯದಲ್ಲಿ ಎಂಟು ವರ್ಷದ ಮಗುವಿಗೆ ನಾಯಿ ಕಚ್ಚಿದ ಪ್ರಕರಣ ಬಳಿಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಬೀದಿ ನಾಯಿಗಳಿಗೆ ರೇಬಿಸ್ ವಿರೋಧಿ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಿದೆ.
ಪಾಲಿಕೆಯ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಾಣಿಗಳ ಜನನ ನಿಯಂತ್ರಣ ಕ್ರಮಗಳನ್ನು ಹೆಚ್ಚಿಸುವ ಕುರಿತು ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.
ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಪಾಲಿಕೆಯು 63,324 ನಾಯಿಗಳಿಗೆ ಲಸಿಕೆ ಹಾಕಿದ್ದು, 32,626 ಬೀದಿ ಮತ್ತು ಸಮುದಾಯದ ನಾಯಿಗಳಿಗೆ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕ್ರಮಗಳನ್ನು ಕೈಗೊಂಡಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರು ಮಾಹಿತಿ ನೀಡಿದ್ದಾರೆ.
ಪ್ರಾಣಿಗಳ ಜನನ ನಿಯಂತ್ರಣ ಕ್ರಮಗಳನ್ನು ಹೆಚ್ಚಿಸಲು ಹೆಚ್ಚಿನ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಪಾಲಿಕೆಯು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಪತ್ರ ಬರೆದಿದೆ ಎಂದು ತಿಳಿಸಿದ್ದಾರೆ.
ಪಶುಸಂಗೋಪನಾ ಇಲಾಖೆಯ ಬಿಬಿಎಂಪಿ ಸಹಾಯಕ ನಿರ್ದೇಶಕ ಮಂಜುನಾಥ ಶಿಂಧೆ ಅವರು ಮಾತನಾಡಿ, ಬೀದಿನಾಯಿಗಳಿಂದಷ್ಟೇ ಅಲ್ಲದೆ, ಸಮುದಾಯ ಮತ್ತು ಸಾಕುನಾಯಿಗಳಿಂದಲೂ ಸಮಸ್ಯೆಗಳು ಕಂಡು ಬರುತ್ತಿವೆ ಎಂದಿದ್ದಾರೆ.
ನಾಯಿಗಳನ್ನು ಚುಡಾಯಿಸುವುದು, ಕಲ್ಲು ಎಸೆಯುವುದು, ರಸ್ತೆಗಳ ಮೂಲೆಗಳಲ್ಲಿ ಕಸ ಎಸೆಯುವುದು, ನಾಯಿಮರಿಗಳ ಬಳಿ ಹೋಗುವುದನ್ನು ಜನರು ತಪ್ಪಿಸಬೇಕು, ನಾಯಿ ಮರಿಗಳ ಬಳಿ ಹೋಗುವುದು ಅದರ ತಾಯಿಗೆ ಕೋಪವನ್ನುಂಟು ಮಾಡಿದಂತಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜುಲೈ 2022ರ ವರೆಗೆ 6,000 ನಾಯಿ ಕಡಿತಗಳ ಪ್ರಕರಣಗಳು ವರದಿಯಾಗಿದೆ.
ಕೆಲ ವರ್ಷಗಳ ಹಿಂದೆ, ಯಲಹಂಕದಲ್ಲಿ ಆರು ವರ್ಷದ ಬಾಲಕ ಹೇಮಂತ್ ಕುಮಾರ್ ರೇಬಿಸ್‌ನಿಂದ ಸಾವನ್ನಪ್ಪಿದ್ದ, ನಾಯಿ ಕಚ್ಚಿದ್ದರೂ ಕೂಡ ಬಾಲಕ ತನ್ನ ಪೋಷಕರ ಬಳಿ ಈ ವಿಚಾರವನ್ನು ತಿಳಿಸದೆ ಮುಚ್ಚಿಟ್ಟಿದ್ದ ಎನ್ನಲಾಗಿದೆ.
Advertisement