ಬೆಂಗಳೂರಿನ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿದ ಬಿಬಿಎಂಪಿ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ಗುರುವಾರ ಪ್ರಕಟಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ಗುರುವಾರ ಪ್ರಕಟಿಸಿದೆ.

ಅದರಂತೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 3 ವಿಧಾನಸಭಾ ಕ್ಷೇತ್ರ (ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ)ಗಳನ್ನು ಹೊರತುಪಡಿಸಿ ಉಳಿದ 25 ವಿಧಾನಸಭಾ ಕ್ಷೇತ್ರಗಳಲ್ಲಿನ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಪ್ರಸ್ತುತ ಬಿಡುಗಡೆ ಮಾಡಿರುವ ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 82,29,375 ಮತದಾರರಿರುವುದು ಕಂಡು ಬಂದಿದೆ. ಈ ಪೈಕಿ 42,65,140 ಪುರುಷರು, 39,62,712 ಮಹಿಳಾ ಮತದಾರರು ಮತ್ತು 1,523 ತೃತೀಯಲಿಂಗಿಗಳಿರುವುದು ಕಂಡು ಬಂದಿದೆ.

ಮಹದೇವಪುರ, ಚಿಕ್ಕಪೇಟೆ ಮತ್ತು ಶಿವಾಜಿನಗರದ ಮೂರು ವಿಧಾನಸಭಾ ಕ್ಷೇತ್ರಗಳ ಅಂತಿಮ ಪಟ್ಟಿಯನ್ನು ಜನವರಿ 15 ರಂದು ಪ್ರಕಟಿಸಲಾಗುವುದು ಎಂದು ಗಿರಿನಾಥ್ ಅವರು ಹೇಳಿದ್ದಾರೆ.

ಅಂತಿಮ ಮತದಾರರ ಪಟ್ಟಿಯನ್ನು ಸಿಇಒ ವೆಬ್‌ಸೈಟ್ ಮತ್ತು ಬಿಬಿಎಂಪಿ ವೆಬ್‌ಸೈಟ್ ನಲ್ಲಿ ಪ್ರಚುರ ಪಡಿಸಲಾಗುವುದು. ಮತದಾರರು ತಮ್ಮ ಮತದಾರರ ಮಾಹಿತಿಯನ್ನು ಪರಿಶೀಲಿಸಿಕೊಂಡು ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆಯಲ್ಲಿ, ಸೇರ್ಪಡೆ ತಿದ್ದುಪಡಿ, ಸ್ಥಳಾಂತರ ಹಾಗೂ ಮತದಾರರ ಪಟ್ಟಿಯಿಂದ ತೆಗೆದುಹಾಕುವಿಕೆ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಈ ಪೈಕಿ ಮೊಬೈಲ್ ತಂತ್ರಾಂಶವಾದ Voter Helpline App, NVSP Portal(www.nvsp.in), 1950 ವೋಟರ್ ಹೆಲ್ಪ್ ಲೈನ್, ವೋಟರ್ ಪೋರ್ಟಲ್ (www.voterportal.eci.gov.in) ಮುಖೇನ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸಾರ್ವಜನಿಕರು/ಮತದಾರರು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com