ರಾಜ್ಯ ಸಂಚಾರ ದಟ್ಟಣೆ ತಗ್ಗಿಸಲು ರೈಲ್ವೆ ಮೇಲ್ಸೇತುವೆ/ಕೆಳ ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 1,000 ಕೋಟಿ ರೂ: ಸಿಎಂ ಬೊಮ್ಮಾಯಿ

ರಾಜ್ಯದ ವಿವಿಧೆಡೆ ಸಂಚಾರ ದಟ್ಟಣೆ ತಗ್ಗಿಸಲು ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಮತ್ತು ರೈಲ್ವೆ ಕೆಳ ಸೇತುವೆಗಳನ್ನು (ಆರ್‌ಯುಬಿ) ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯಕ್ಕೆ 1,000 ಕೋಟಿ ರೂಪಾಯಿ ಮಂಜೂರು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಚಾರ ದಟ್ಟಣೆ ತಗ್ಗಿಸಲು ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಮತ್ತು ರೈಲ್ವೆ ಕೆಳ ಸೇತುವೆಗಳನ್ನು (ಆರ್‌ಯುಬಿ) ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯಕ್ಕೆ 1,000 ಕೋಟಿ ರೂಪಾಯಿ ಮಂಜೂರು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಹೆದ್ದಾರಿಗಳಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಇತರೆ ನಗರಗಳಲ್ಲಿ ಸಂಚಾರ ದಟ್ಟಣೆ ಇರುವ ಕಡೆ ಸಂಚಾರ ಸುಗಮಗೊಳಿಸಲು ಆರ್‌ಒಬಿ ಮತ್ತು ಆರ್‌ಯುಬಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಕುರಿತು ಮಾತನಾಡಿ, ಬೆಂಗಳೂರಿನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಲು ಮೇಲ್ಸೇತುವೆಗಳನ್ನು ನಿರ್ಮಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಗಡ್ಕರಿ ಅವರು ಸರ್ಕಾರಕ್ಕೆ ಸೂಚಿಸಿದ್ದಾರೆ. ಇದರೊಂದಿಗೆ, ಹೆದ್ದಾರಿಗಳಲ್ಲಿ ಸಂಚಾರವನ್ನು ಈ ಮೇಲ್ಸೇತುವೆಗಳಿಗೆ ಬದಲಿಸಲಾಗುತ್ತದೆ, ಇದರಿಂದ ನಗರದೊಳಗಿನ ಸಂಚಾರವನ್ನು ತಪ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಮೆಟ್ರೋದಿಂದ ಬೇರೆ ಕಡೆ ಹೋಗಲು ಡಬ್ಬಲ್ ಡೆಕ್ಕರ್ ಬಸ್ ಹಾಗೂ ಮೋನೊ ರೈಲು ನಿರ್ಮಾಣ ಸಂಬಂಧ ಸಭೆಯಲ್ಲಿ ಚರ್ಚೆ ಆಗಿದೆ. ರಿಂಗ್ ರಸ್ತೆ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಶಿರಾಡಿಘಾಟ್‌ನಲ್ಲಿ 4 ಲೈನ್ ಮಾಡಲು ತೀರ್ಮಾನ ಮಾಡಲಾಗಿದೆ. 4 ಲೈನ್ ನಿರ್ಮಾಣ ಕಾಮಗಾರಿಗೆ ಮಾರ್ಚ್‌ನಲ್ಲಿ ಚಾಲನೆ ನೀಡುತ್ತೇವೆ. ಬೆಂಗಳೂರು-ಮೈಸೂರು ರಸ್ತೆ ಫೆಬ್ರವರಿ, ಮಾರ್ಚ್‌ನಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

ಎಲ್ಲ ಯೋಜನೆಗಳಲ್ಲಿ ಮರಳು, ಜಲ್ಲಿ ಮತ್ತಿತರ ಸಾಮಗ್ರಿಗಳ ಮೇಲಿನ ರಾಯಲ್ಟಿ ವಿನಾಯಿತಿ ಹಾಗೂ ಜಿ.ಎಸ್.ಟಿ. ರಿಯಾಯಿತಿ ನೀಡುವುದರ ಜೊತೆಗೆ ಭೂಸ್ವಾಧೀನ ವೆಚ್ಚ ರಾಜ್ಯ ಸರ್ಕಾರ ಭರಿಸುವುದರಿಂದ ವಿನಾಯಿತಿ ನೀಡುವ ಕುರಿತು ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಶಿರಾಡಿ ಘಾಟ್ ಚತುಷ್ಪಥ ಕಾಮಗಾರಿ ಟೆಂಡರ್ ಮಾಡಲಾಗಿದೆ, ಮಾರ್ಚ್ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. 10 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಸುರಂಗ ಮಾರ್ಗ ಯೋಜನೆಯ ವಿನ್ಯಾಸ ಸಿದ್ಧಪಡಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೊಸಪೇಟೆ – ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನೆನೆಗುದಿಗೆ ಬಿದ್ದಿದ್ದು, ಮರು ಟೆಂಡರ್ ಮಾಡಲಾಗಿದ್ದು, ಫೆಬ್ರುವರಿಯಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ವಿವಿಧ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕೂಡಲೇ ಕೈಗೆತ್ತಿಕೊಳ್ಳಲು ಸೂಚಿಸಿದರು. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಸಹಕಾರ ನೀಡುವುದಾಗಿ ತಿಳಿಸಲಾಗಿದೆ.

ಯಶವಂತಪುರ ಎಲಿವೇಟೆಡ್ ರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಣೆಗೆ ವಿನ್ಯಾಸ ಪಡೆದು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸಚಿವರು ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಬನ್ನೇರುಘಟ್ಟ ಅರಣ್ಯದಲ್ಲಿ ಎಸ್‌ಟಿಆರ್‌ಆರ್‌ ಹಾದು ಹೋಗುವ ಆತಂಕವನ್ನು ರಾಜ್ಯ ವನ್ಯಜೀವಿ ಸಮಿತಿಗೆ ತಿಳಿಸಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. "ಇದು ಹೆಚ್ಚು ಸಮಯ ತೆಗೆದುಕೊಳ್ಳಲಿದ್ದು, ಖರ್ಚು ಕೂಡ ಹೆಚ್ಚಾಗಲಿದೆ.  ಆದರೆ ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬರದಂತೆ ನೋಡಿಕೊಳ್ಳುತ್ತೇವೆಂದು ತಿಳಿಸಿದರು.

ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗಳನ್ನು ಪರಿಶೀಲಿಸಿ ಮಾತನಾಡಿದ ಗಡ್ಕರಿ ಅವರು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಸ್ತುತ 46,840 ಕೋಟಿ ರೂ.ಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಮಾರ್ಚ್‌ನಲ್ಲಿ ಶಿರಾಡಿ ಘಾಟ್‌ನ ಚತುಷ್ಪಥ ಕಾಮಗಾರಿ ಆರಂಭವಾಗಲಿದೆ. 10,000 ಕೋಟಿ ರೂ.ಗೆ ಸುರಂಗ ನಿರ್ಮಿಸುವ ಪ್ರಸ್ತಾವನೆ ಇದೆ, ಆದರೆ ಇದು ದೀರ್ಘಾವಧಿಯ ಕ್ರಮವಾಗಿದೆ ಬೊಮ್ಮಾಯಿಯವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com