ಬೆಂಗಳೂರು: ಯುವತಿಯೊಂದಿಗೆ ಆಟೋ ಚಾಲಕ ಅಸಭ್ಯ ವರ್ತನೆ, ಪ್ರಕರಣ ದಾಖಲು

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮಾರ್ಕೆಟಿಂಗ್ ಏಜೆನ್ಸಿಯ ಮಾರ್ಕೆಟಿಂಗ್ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಹಾಗೂ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳೊಂದಿಗೆ ಆಟೋರಿಕ್ಷಾ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ್ದು, ಈ ಸಂಬಂಧ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮಾರ್ಕೆಟಿಂಗ್ ಏಜೆನ್ಸಿಯ ಮಾರ್ಕೆಟಿಂಗ್ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಹಾಗೂ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳೊಂದಿಗೆ ಆಟೋರಿಕ್ಷಾ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ್ದು, ಈ ಸಂಬಂಧ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವತಿ ಕೈಕೊಂಡ್ರಹಳ್ಳಿಯಲ್ಲಿರುವ ಪಿಜಿ ವಸತಿಗೃಹಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಆಟೋ ಚಾಲಕ, ತನ್ನ ಖಾಸಗಿ ಭಾಗಗಳಿಗೆ ಹೊಡೆದಿದ್ದಾನೆಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಮಂಗಳವಾರ ಸಂಜೆ 6 ರಿಂದ 6.20 ರ ನಡುವೆ ಇಂದಿರಾನಗರದ 6ನೇ ಮುಖ್ಯ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ, ಆಟೋ ಚಾಲಕ ಡಿಕ್ಕಿ ಹೊಡೆದ. ಅದೃಷ್ಟವಶಾತ್ ತಪ್ಪಿಸಿಕೊಂಡೆ. ನೋಡಿಕೊಂಡು ವಾಹನ ಓಡಿಸಿ ಎಂದು ಹೇಳಿದಾಗ ಆತ ನನ್ನ ಮೇಲೆ ಕೂಗಾಡಲು ಶುರು ಮಾಡಿದ. ಬಳಿಕ ನನ್ನ ಖಾಸಗಿ ಭಾಗಗಳಿಗೆ ಹೊಡೆದ. ಈ ವೇಳೆ ಓರ್ವ ಮಹಿಳೆ ನನಗೆ ಸಹಾಯ ಮಾಡಲು ಮುಂದಾದರು, ಆದರೆ, ಉಳಿದವರು ನೋಡುತ್ತಲೇ ಸುಮ್ಮನೆ ನಿಂತಿದ್ದರು. ಬಳಿಕ ಆರೋಪಿ ಪರಾರಿಯಾದ. ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೆ. ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆಟೋ ನೋಂದಣಿ ಸಂಖ್ಯೆಯನ್ನೂ ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಯುವತಿ ಹೇಳಿದ್ದಾರೆ.

ಬಳಿಕ ನನ್ನ ಸಹೋದ್ಯೋಗಿ ಹಾಗೂ ಹಿರಿಯರೊಂದಿಗೆ ಘಟನೆ ಬಗ್ಗೆ ಹೇಳಿಕೊಂಡೆ. ಅವರು ನೀಡಿದ ಸಲಹೆಯಂತೆ ಪೊಲೀಸರಿಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.

'ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಮತ್ತು ಆಟೋದ ಹೆಚ್ಚಿನ ವಿವರಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಸಂಬಂಧ ಇಂದಿರಾನಗರ ಪೊಲೀಸರು ಹಲ್ಲೆ ಅಥವಾ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com