ಬೆಂಗಳೂರು: 120 ಮಂದಿ ಅಸ್ವಸ್ಥಗೊಂಡಿದ್ದಕ್ಕೆ ಕೊಳಚೆ ನೀರು ಪೂರೈಕೆ ಕಾರಣ!

ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್'ಮೆಂಟ್ ಸಂಕೀರ್ಣಕ್ಕೆ ಸರಬರಾಜುಗೊಂಡ ನೀರಿನಲ್ಲಿ ಕೊಳಚೆ ನೀರು ಸೇರಿದ್ದರಿಂದಲೇ 120 ಮಂದಿ ಅಸ್ವಸ್ಥಗೊಂಡಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್'ಮೆಂಟ್ ಸಂಕೀರ್ಣಕ್ಕೆ ಸರಬರಾಜುಗೊಂಡ ನೀರಿನಲ್ಲಿ ಕೊಳಚೆ ನೀರು ಸೇರಿದ್ದರಿಂದಲೇ 120 ಮಂದಿ ಅಸ್ವಸ್ಥಗೊಂಡಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.

ಜೂನ್.5ರಂದು ಇಲೆಕ್ಟ್ರಾನಿಕ್ಸ್ ಸಿಟಿಯ ಹೊಸ ರಸ್ತೆಯಲ್ಲಿರುವ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನಲ್ಲಿ ಕಲುಷಿತ ನೀರು ಕುರಿತು 98 ಮಕ್ಕಳು ಮತ್ತು ಹಿರಿಯ ನಾಗರೀಕರು ಸೇರಿದಂತೆ 120ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.

ಈ ಸಂಬಂಧ ಆರೋಗ್ಯ ಇಲಾಖೆ ವರದಿ ನೀಡಿದ್ದು, ವರದಿಯು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ ತ್ರಿಲೋಕ್ ಚಂದ್ರ ಅವರ ಕೈ ಸೇರಿದೆ.

ವರದಿ ಸಂಬಂಧ ಪ್ರತಿಕ್ರಿಯೆ ನೀಡಿರುವ ತ್ರಿಲೋಕ್ ಚಂದ್ರ ಅವರು, ಕಟ್ಟಡಕ್ಕೆ ನೀರು ಸರಬರಾಜು ಮಾಡುವ ಬೋರ್‌ವೆಲ್‌ನ ನೀರಿನ ಮಾದರಿಯಲ್ಲಿ ಕೊಳಚೆ ನೀರು ಸೇರಿರುವುದು ಕಂಡು ಬಂದಿದೆ. ಇದರಿಂದಲೇ ನೀರು ಕಲುಷಿತಗೊಂಡಿರುವುದಾಗಿ ತಿಳಿದುಬಂದಿದೆ. ಈ ಕೊಳಚೆ ನೀರಿನ ಕೇಂದ್ರ ಬಿಂದು ಯಾವುದು ಎಂಬುದು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಬೋರ್‌ವೆಲ್ ಮುಚ್ಚಲು ಹಾಗೂ ಅಕ್ಕಪಕ್ಕದ ಬೋರ್‌ವೆಲ್‌ಗಳ ನೀರಿನ ಮಾದರಿಗಳನ್ನು ಪರೀಕ್ಷಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಹೊಸ ರಸ್ತೆಯಲ್ಲಿರುವ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸದ್ಯಕ್ಕೆ ಪರ್ಯಾಯ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರ ಯೋಜಕರಾದ ರಾಜಶ್ರೀ ದಾಸ್ ಅವರು ಮಾತನಾಡಿ, ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಂದಕ್ಕೊಂದು ಹಾದು ಹೋಗಿರುತ್ತವೆ. ಈ ಸಂದರ್ಭದಲ್ಲಿ ನೀರು ಮಲಿನಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಿದ್ದಾರೆ.

ನಗರದ ಮೂಲಸೌಕರ್ಯವು ಅತ್ಯಂತ ಕಳಪೆಯಾಗಿದೆ, ಬಹುತೇಕ ರಸ್ತೆಗಳು ಯಾವಾಗಲೂ ನಿರ್ಮಾಣ ಹಂತದಲ್ಲಿರುತ್ತವೆ. ಮಳೆಗಾಲದ ಮೊದಲು ಚರಂಡಿಗಳನ್ನು ನಿರ್ಮೂಲನೆ ಮಾಡಲಾಗುತ್ತದೆ, ಇದು ಪೈಪ್‌ಲೈನ್‌ಗಳನ್ನು ಹಾನಿಗೊಳಿಸುತ್ತದೆ. ನಿರ್ಮಾಣ ಕಾರ್ಯವು ಪೈಪ್'ಗಳ ಸೋರಿಕೆ ಅಥವಾ ಒಡೆಯಲು ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕೊಳಚೆ ನೀರು ಕಲುಷಿತಗೊಳ್ಳುವುದರಿಂದ ನೀರಿನ ಬಣ್ಣ ಮತ್ತು ರುಚಿಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com