ಬಡವರಿಗೆ ಬೆಲೆ ಏರಿಕೆ ಬಿಸಿ: ಟೊಮೆಟೋ ಒಂದೇ ಅಲ್ಲ, ಎಲ್ಲಾ ತರಕಾರಿಗಳ ಬೆಲೆ ಗಗನಕ್ಕೆ!

ಟೊಮೆಟೊ ದರದಲ್ಲಿ ಭಾರಿ ಹೆಚ್ಚಳವಾಗಿದ್ದು, ಒಂದೇ ವಾರದಲ್ಲಿ ಟೊಮೆಟೋ ಬೆಲೆ ಕೆಜಿಗೆ ರೂ.100ಕ್ಕೆ ಏರಿಕೆಯಾಗಿದೆ. ಕೇವಲ ಟೊಮೆಟೋ ಅಷ್ಟೇ ಅಲ್ಲ ಕ್ಯಾರೆಟ್, ಬೀನ್ಸ್ ಮತ್ತು ಮೆಣಸಿನಕಾಯಿಯ ದರ ಕೂಡ ಗಗನಕ್ಕೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಟೊಮೆಟೊ ದರದಲ್ಲಿ ಭಾರಿ ಹೆಚ್ಚಳವಾಗಿದ್ದು, ಒಂದೇ ವಾರದಲ್ಲಿ ಟೊಮೆಟೋ ಬೆಲೆ ಕೆಜಿಗೆ ರೂ.100ಕ್ಕೆ ಏರಿಕೆಯಾಗಿದೆ. ಕೇವಲ ಟೊಮೆಟೋ ಅಷ್ಟೇ ಅಲ್ಲ ಕ್ಯಾರೆಟ್, ಬೀನ್ಸ್ ಮತ್ತು ಮೆಣಸಿನಕಾಯಿಯ ದರ ಕೂಡ ಗಗನಕ್ಕೇರಿದೆ.

ನಗರದ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಎಚ್‌ಒಪಿಕಾಮ್ಸ್) ಕಳೆದ ಒಂದು ತಿಂಗಳಿನಿಂದ ಬೆಲೆಯಲ್ಲಿನ ಏರಿಕೆಗಳು ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದೆ.

ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ಕೆಜಿ ಟೊಮ್ಯಾಟೊ ಬೆಲೆ 125 ರೂಕ್ಕೆ ನಿಗದಿಯಾಗಿತ್ತು. ಮಂಗಳವಾರ ದರವು ಕೆಜಿಗೆ 110 ರೂ.ಗೆ ಇಳಿಕೆಯಾಗಿದ್ದು ಕಂಡು ಬಂದಿತು.

ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ್ ಶಂಕರ್ ಅವರು ಮಾತನಾಡಿ, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್‌ನಿಂದ ಉತ್ಪನ್ನಗಳನ್ನು ಪಡೆಯುವುದನ್ನು ನಿಲ್ಲಿಸಿದ್ದೇವೆ, ಇದು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದಾದ್ಯಂತ ಮಳೆ ಕೊರತೆ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಇನ್ನೂ ಒಂದೆರಡು ವಾರಗಳವರೆಗೆ ಬೆಲೆಗಳು ಕಡಿಮೆಯಾಗದಿರಬಹುದು, ಇದು ಗ್ರಾಹಕರ ಮೇಲೆ ಭಾರೀ ಹೊರೆಯನ್ನುಂಟು ಮಾಡಲಿದೆ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ತರಕಾರಿ ಖರೀದಿಸುವಂತಾಗಿದೆ ಎಂದು ಇಂದಿರಾನಗರದ ತರಕಾರಿ ವ್ಯಾಪಾರಿ ಪ್ರದೀಪ್ ಗೌಡ ಅವರು ಹೇಳಿದ್ದಾರೆ.

ಬೀನ್ಸ್‌ ದರ ಕೆಜಿಗೆ 95 ರೂ.ಗೆ ಜಿಗಿದಿದೆ. ಕ್ಯಾರೆಟ್‌ ಬೆಲೆಯೂ ರೂ.80ಕ್ಕೆ ತಲುಪಿದೆ. ಹಸಿ ಮೆಣಸಿನಕಾಯಿ ದರ ಕೆಜಿಗೆ 110 ರೂಗೆ ತಲುಪಿದೆ.

ಈ ನಡುವೆ ಬೆಲೆ ಏರಿಕೆಯು ಕೇವಲ ಬಡವರು, ಮಧ್ಯಮವರ್ಗದ ಜನರ ಮೇಲಷ್ಟೇ ಅಲ್ಲದೆ, ರೆಸ್ಟೋರೆಂಟ್ ಗಳ ಮೇಲೂ ಪರಿಣಾಮ ಬೀರುತ್ತಿವೆ.

ಸ್ಥಳೀಯ ಮಾರುಕಟ್ಟೆಗಳಿಂದ ತರಕಾರಿಗಳನ್ನು ಪಡೆಯುವ ಸಣ್ಣ ತಿನಿಸುಗಳು ಮತ್ತು ರೆಸ್ಟೋರೆಂಟ್‌ಗಳಿಗೂ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಶೇ.10-15ರಷ್ಟು ನಷ್ಟವನ್ನು ಅನುಭವಿಸುತ್ತಿವೆ ಎಂದು ತಿಳಿದುಬಂದಿದೆ.

ಪ್ರತಿಯೊಂದು ಖಾದ್ಯದಲ್ಲೂ ಟೊಮೆಟೊ ಬಳಸುತ್ತೇವೆ. ಟೊಮ್ಯಾಟೋ ತಿನಿಸುಗಳ ತಯಾರಿಕೆಯಲ್ಲಿ ಪ್ರಮುಖ ವಸ್ತುವಾಗಿದೆ. ಸ್ಥಳೀಯ ಮಾರುಕಟ್ಟೆಯಿಂದ ತರಕಾರಿಗಳನ್ನು ತರುತ್ತಿದ್ದೇವೆ. ಬೆಲೆ ಏರಿಕೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ತಿನಿಸುಗಳ ಬೆಲೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಷ್ಟ ಎದುರಾಗುತ್ತಿದೆ. ಶೀಘ್ರದಲ್ಲೇ ಬೆಲೆ ಇಳಿಕೆಯಾಗುವ ಭರವಸೆಯಲ್ಲಿದ್ದೇವೆಂದು ಜೆ.ಪಿ.ನಗರದಲ್ಲಿ ಕೆಫೆ ನಡೆಸುತ್ತಿರುವ ಅಂಜು ಸುದರ್ಶನ್ ಎಂಬುವವರು ಹೇಳಿದ್ದಾರೆ.

ಬೆಲೆ ಇಳಿಕೆಯಾಗದೇ ಹೋದಲ್ಲಿ ಅನಿವಾರ್ಯವಾಗಿ ನಾವು ತಿನಿಸುಗಳ ದರಗಳನ್ನು ಏರಿಕೆ ಮಾಡಲೇಬೇಕಾಗುತ್ತದೆ. ಲಾಭವು ಶೇ.15-20ರಷ್ಟು ಕಡಿಮೆಯಾಗಿದೆ. ಕೆಲಸಗಾರರಿಗೆ ಕೂಲಿ ನೀಡಲು ಸಾಧ್ಯವಾಗುತ್ತಿಲ್ಲ. ತರಕಾರಿಗಳ, ಧಾನ್ಯಗಳ ಬೆಲೆ ಶೇ.50ರಷ್ಟು ಹೆಚ್ಚಳವಾಗಿದೆ. ಈ ಪರಿಸ್ಥಿತಿಯಲ್ಲಿ ಬದುಕು ನಡೆಸುವುದು ಹೇಗೆ? ಎಂದು ಬೈಯಪ್ಪನಹಳ್ಳಿಯಲ್ಲಿರುವ ಶ್ರೀ ಕೃಷ್ಣ ಗಂಗೋತ್ರಿ ರೆಸ್ಟೊರೆಂಟ್‌ನ ಮಾಲೀಕರು ಹೇಳಿದ್ದಾರೆ.

ಈ ನಡುವೆ ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಲು ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಬೇಕೆಂದು ಸರ್ಕಾರಕ್ಕೆ ಹಲವು ಗ್ರಾಹಕರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com