ಪ್ರತಿಭಟನಾನಿರತ ಪೌರಕಾರ್ಮಿಕರು.
ಪ್ರತಿಭಟನಾನಿರತ ಪೌರಕಾರ್ಮಿಕರು.

 ಪೌರ ಕಾರ್ಮಿಕರ ನೌಕರಿ ಖಾಯಂಗೊಳಿಸುವುದಾಗಿ ಸರ್ಕಾರ ಭರವಸೆ: ಧರಣಿ ಅಂತ್ಯ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಪೌರಕಾರ್ಮಿಕರ ಬೇಡಿಕೆಗೆ ಮನ್ನಣೆ ನೀಡಿದ್ದು, ಅವರ ಉದ್ಯೋಗಗಳನ್ನು ಕಾಯಂಗೊಳಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
Published on

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಪೌರಕಾರ್ಮಿಕರ ಬೇಡಿಕೆಗೆ ಮನ್ನಣೆ ನೀಡಿದ್ದು, ಅವರ ಉದ್ಯೋಗಗಳನ್ನು ಕಾಯಂಗೊಳಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.

16,000 ಪೌರಕಾರ್ಮಿಕರ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ವಿರುದ್ಧ ಬಿಬಿಎಂಪಿ 3,673 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ (ಎಐಸಿಸಿಟಿಯು) ಸಂಯೋಜಿತ ಕರ್ನಾಟಕ ಪೌರಕಾರ್ಮಿಕ ಸಂಘ ಮತ್ತು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು.

ಇದಲ್ಲದೆ, ನಕಲಿ ದಾಖಲೆಗಳನ್ನು ಸಲ್ಲಿಸಿ ಲಂಚ ನೀಡಿ ಬಿಬಿಎಂಪಿಗೆ ಹಲವು ಪೌರಕಾರ್ಮಿಕರನ್ನು ಅಕ್ರಮವಾಗಿ ನೇಮಿಸಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದರು. ಈ ನೇಮಕಾತಿ ಆದೇಶವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು.

ಎಲ್ಲ ಪೌರಕಾರ್ಮಿಕರ ಉದ್ಯೋಗಗಳನ್ನು ಕಾಯಂಗೊಳಿಸಬೇಕೆಂಬ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಬೇಡಿಕೆಗೆ ಸರಕಾರ ಮನ್ನಣೆ ನೀಡಿದ್ದು, ಈ ಸಂಬಂಧ ಕ್ರಮಕೈಗೊಳ್ಳಲಾಗುವುದು. ಒಂದು ಅಥವಾ ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದೆ.

ಮಂಗಳವಾರ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಅವರು, ಪ್ರತಿಭಟನಾ ನಿರತ ಪೌರಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಎಲ್ಲ ಪೌರಕಾರ್ಮಿಕರ ನೌಕರಿಯನ್ನು ಖಾಯಂ ಮಾಡುವ ಕಡತ ಮುಖ್ಯಮಂತ್ರಿಗಳ ಮುಂದಿದ್ದು, ಎರಡು ದಿನಗಳಲ್ಲಿ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಎರಡು ವಾರಗಳ ಅವಧಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ 16,000 ಪೌರಕಾರ್ಮಿಕರ ಉದ್ಯೋಗಗಳನ್ನು ಏಕಕಾಲಕ್ಕೆ ಖಾಯಂಗೊಳಿಸಲಾಗುವುದು ಮತ್ತು ಅಲ್ಲಿಯವರೆಗೆ 3,673 ಕಾರ್ಮಿಕರಿಗೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿದೆ. ಪೌರಕಾರ್ಮಿಕರನ್ನು ಕಾಯಂ ಮಾಡದಿದ್ದರೆ ಬೀದಿಗಿಳಿಯದೇ ನಮಗೆ ಬೇರೆ ದಾರಿಯಿಲ್ಲ ಎಂದು ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯೆ ಮೈತ್ರೇಯಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com