ಬೆಂಗಳೂರು: ರಾಜ್ಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಕರ್ನಾಟಕ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಸಂಬಂಧಿಕರ ಮನೆ ಸೇರಿದಂತೆ ಬೆಂಗಳೂರಿನ ಹಲವೆಡೆ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಮೂರೇ ದಿನಗಳು ಬಾಕಿ ಇದ್ದು, ಈ ವೇಳೆ ಹರಿದಾಡುವ ಹಣದ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಇದೀಗ ರಾಜ್ಯದಲ್ಲಿ ಐಟಿ ದಾಳಿ ಮುಂದುವರೆದಿದ್ದು, ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಸಹೋದರಿ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೋರಮಂಗಲದ 1ನೇ ಬ್ಲಾಕ್ನಲ್ಲಿರುವ ನಿವಾಸ ಎಸ್.ಎಂ.ಕೃಷ್ಣ ಸಹೋದರಿ ಎಸ್ಎಂ ಸುನೀತಾ ಅವರ ಮನೆ ಮೇಲೆ ಐಟಿ ದಾಳಿಯಾಗಿದ್ದು, ಬಾಗ್ಮನೆ ಹೆಸರಿನಲ್ಲಿರುವ ನಿವಾಸ ಹಾಗೂ ಬಾಗ್ಮನೆ ಬಿಲ್ಡರ್ ಕಚೇರಿಗಳ ಮೇಲೆಯೂ ದಾಳಿ ನಡೆಸಲಾಗಿದೆ, ಮೂಲಗಳ ಪ್ರಕಾರ ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆಯುತ್ತಿದ್ದು, ಈ ವೇಳೆ ಅಧಿಕಾರಿಗಳು ಸಾಕಷ್ಟು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತೊಂಡೆದೆ, ಟ್ರಾನ್ ಇನ್ಸೈನಿಯಾ ಅಪಾರ್ಟ್‌ಮೆಂಟ್ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಸುಮಾರು ಎಂಟು ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಹರಿರೆಡ್ಡಿ ಮನೆ ಮೇಲೂ ದಾಳಿ
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿಯೂ ಐಟಿ ದಾಳಿಗಳು ಮುಂದುವರೆದಿದೆ. ಉಳಿದಂತೆ ರಿಯಲ್ ಎಸ್ಟೇಟ್ ಉದ್ಯಮಿ ಹರಿರೆಡ್ಡಿ ಎಂಬುವರ ಮನೆಯ ಮೇಲೂ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ಬೆಂಗಳೂರಿನ ಕಾಮಾಕ್ಯ ಬಳಿ ಇರುವ ಉದ್ಯಮಿ ಹರಿರೆಡ್ಡಿ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೂರು ಇನ್ನೋವಾ ಕಾರುಗಳಲ್ಲಿ ಅಧಿಕಾರಿಗಳು ಆಗಮಿಸಿದ್ದು, ಶನಿವಾರ ಸಂಜೆಯಿಂದಲೇ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement