
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಹಣ ರವಾನೆ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಐಟಿ ಅಧಿಕಾರಿಗಳು ಹಲವು ಫೈನಾನ್ಶಿಯರ್ ಗಳ ಮನೆ ಮತ್ತು ಕಚೇರಿಗಳ ದಾಳಿ ಮಾಡಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನ ಹಲವು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದ್ದು, ಸುಮಾರು 15 ಕೋಟಿಗೂ ಅಧಿಕ ಹಣ ವಶಕ್ಕೆ ಪಡೆಯಲಾಗಿದೆ. ಫೈನಾನ್ಸಿಯರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ್ದು, ಇವರು ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಿಗೆ ಹಣಕಾಸು ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಫಂಡ್ ಒದಗಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಹಾಗೂ ಮೈಸೂರಿನ ಹಲವೆಡೆ ದಾಳಿ ನಡೆಸಿದ್ದಾರೆ.
ಕೆಲವು ಫೈನಾನ್ಸಿಯರ್ ಗಳು ಬೇನಾಮಿಗಳಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಸುಮಾರು 15 ಕೋಟಿಗೂ ಅಧಿಕ ಹಣ ವಶಕ್ಕೆ ಪಡೆಯಲಾಗಿದೆ. 15 ಕೋಟಿಗೂ ಹೆಚ್ಚಿನ ಪ್ರಮಾಣದ ನಗದು ಹಾಗೂ 5 ಕೋಟಿ ಬೆಲೆಬಾಳುವ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ದಾಖಲೆಗಳು ಸಹ ಪತ್ತೆಯಾಗಿವೆ.
ಎಲ್ಲೆಲ್ಲಿ ದಾಳಿ
ಬೆಂಗಳೂರಿನ ಶಾಂತಿನಗರ, ಕಾಕ್ಸ್ ಟೌನ್, ಶಿವಾಜಿನಗರ, RMV ಬಡಾವಣೆ, ಕನಿಂಗ್ಹ್ಯಾಮ್ ರಸ್ತೆ, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್, ಸೇರಿ ಹಲವು ಕಡೆಗಳಲ್ಲಿ ದಾಳಿ ನಡೆದಿದೆ. ನಿನ್ನೆ ಮುಂಜಾನೆಯೇ ದಾಳಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿದ್ದು, ಅಕ್ರಮಗಳನ್ನು ತಡೆಯುವುದಕ್ಕಾಗಿ ಚುನಾವಣಾ ಆಯೋಗ ಹದ್ದಿನಕಣ್ಣಿಟ್ಟಿದೆ. ಈ ಮಧ್ಯೆ, ಆದಾಯ ತೆರಿಗೆ ಇಲಾಖೆಯೂ ಹಣಕಾಸು ವಹಿವಾಟುಗಳ ಮೇಲೆ ಸೂಕ್ಷ್ಮ ನಿಗಾ ಇರಿಸಿದೆ. ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸೋದರನ ಮನೆಯಲ್ಲಿ ಒಂದು ಕೋಟಿ ನಗದು ಹಣ ಸಿಕ್ಕಿತ್ತು. ಕೆಲವೇ ದಿನಗಳ ಹಿಂದೆ ಮೈಸೂರಿನಲ್ಲಿ ದಾಳಿ ಮಾಡಿದ್ದ ಐಟಿ ಅಧಿಕಾರಿಗಳಿಗೆ ಮನೆಯಂಗಳದಲ್ಲಿದ್ದ ಗಿಡದಲ್ಲಿ ಮಾವಿನ ಹಣ್ಣಿನ ಬಾಕ್ಸ್ ನಲ್ಲಿ ಬಚ್ಚಿಟ್ಟಿದ್ದ ಕಂತೆ ಕಂತೆ ಹಣ ಪತ್ತೆಯಾಗಿತ್ತು.
Advertisement