ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರಿಗೆ ಶಾಕ್: ಏಪ್ರಿಲ್ ಒಂದೇ ತಿಂಗಳಲ್ಲಿ 6.56 ಲಕ್ಷ ರೂ. ದಂಡ ಸಂಗ್ರಹಿಸಿದ ಬಿಎಂಟಿಸಿ
ಬೆಂಗಳೂರು: ಟಿಕೆಟ್ ರಹಿತವಾಗಿ ಪ್ರಯಾಣಿಸುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ತೀವ್ರಗೊಳಿಸಿದ್ದ ಬಿಎಂಟಿಸಿಯು ಏಪ್ರಿಲ್ ಒಂದೇ ತಿಂಗಳಿನಲ್ಲಿ ದಂಡದ ರೂಪದಲ್ಲಿ ಒಟ್ಟು 6.56 ಲಕ್ಷ ರೂ ಹಣವನ್ನು ಸಂಗ್ರಹಿಸಿದೆ.
ಬಿಎಂಟಿಸಿ ತಪಾಸಣಾ ಸಿಬ್ಬಂದಿ 14,670 ಟ್ರಿಪ್‌ಗಳ ಬಸ್ ಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ 3,382 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ್ದಾರೆ. ಇದಲ್ಲದೆ, ಕರ್ತವ್ಯಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧ 1,340 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ, ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಮೀಸಲಾದ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ್ದ 268 ಪುರುಷ ಪ್ರಯಾಣಿಕರಿಂದ 26,800 ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಏಪ್ರಿಲ್ ತಿಂಗಳಲ್ಲಿ 6,56,740 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಂಡ ಹಾಗೂ ಮುಜುಗರವನ್ನು ತಪ್ಪಿಸಲು ಸಾರ್ವಜನಿಕರು ಪ್ರಯಾಣಿಸುವಾಗ ಟಿಕೆಟ್ ಮತ್ತು ಪಾಸ್‌ಗಳನ್ನು ಖರೀದಿಸುವಂತೆ ನಿಗಮವು ಮನವಿ ಮಾಡಿಕೊಂಡಿದೆ. ಅಲ್ಲದೆ, ಮಹಿಳಾ ಪ್ರಯಾಣಿಕರಿಗೆ ಮೀಸಲಿರುವ ಆಸನದಲ್ಲಿ ಕುಳಿತು ಪ್ರಯಾಣಿಸದಂತೆಯೂ ಮನವಿ ಮಾಡಿಕೊಂಡಿದೆ. ಆದರೆ, ಕೆಲ ಪ್ರಯಾಣಿಕರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ