ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾನವ ಕಳ್ಳಸಾಗಣೆ: ರಾಜ್ಯದ ಹಲವೆಡೆ ಎನ್ಐಎ ದಾಳಿ, 10 ಮಂದಿ ಬಂಧನ

ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧನಕ್ಕೊಳಪಡಿಸಿದ್ದಾರೆ.

ಗುವಾಹಟಿ, ಚೆನ್ನೈ, ಬೆಂಗಳೂರು ಮತ್ತು ಜೈಪುರದ ಎನ್‌ಐಎ ಕಚೇರಿಗಳಲ್ಲಿ ಈ ಹಿಂದೆ ನಾಲ್ಕು ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿತ್ತು. ಅಕ್ರಮ ಬಾಂಗ್ಲಾ ವಲಸಿಗರು ಮಾನವ ಕಳ್ಳಸಾಗಾಣಿಕೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಬಂಧ ಬೆಂಗಳೂರು ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.

ಈ ದೂರು ಆಧರಿಸಿ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯ ಪೊಲೀಸ್ ಇಲಾಖೆಗಳ ಸಮನ್ವಯದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾರ್ಯಾಚರಣೆ ನಡೆಸಿತ್ತು.

ಕರ್ನಾಟಕವಷ್ಟೇ ಅಲ್ಲದೆ, ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಹರಿಯಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು  55 ಸ್ಥಳಗಳಲ್ಲಿ ಏಕಕಾಲದಲ್ಲಿ ಎನ್ಐಎ ದಾಳಿ ನಡೆಸಿದೆ.

ಭಾರತ-ಬಾಂಗ್ಲಾದೇಶದ ಗಡಿಯಿಂದ ಭಾರತದೊಳಗೆ ಅಕ್ರಮ ವಲಸಿಗರ ಒಳನುಸುಳುವಿಕೆಯಲ್ಲಿ ತೊಡಗಿರುವ ಅಕ್ರಮ ಮಾನವ ಕಳ್ಳಸಾಗಣೆ ಬೆಂಬಲ ಜಾಲಗಳನ್ನು ಕಿತ್ತುಹಾಕುವ ಗುರಿಯನ್ನು ಈ ಕಾರ್ಯಾಚರಣೆಯು ಹೊಂದಿತ್ತು.

ದಾಳಿ ವೇಳೆ ಎನ್ಐಎ ಅಧಿಕಾರಿಗಳು, ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಪೆನ್ ಡ್ರೈವ್‌ಗಳಂತಹ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು ಸೇರಿದಂತೆ ವಿವಿಧ ಗುರುತಿನ ದಾಖಲೆಗಳೂ ಪತ್ತೆಯಾಗಿದ್ದು, ಇವುಗಳು ನಕಲಿ ಎಂದು ಶಂಕಿಸಲಾಗಿದ್ದು, ಅವುಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್ಲದೆ, ರೂ.20 ಲಕ್ಷಕ್ಕೂ ಹೆಚ್ಚು ಹಣ ಮತ್ತು 4,550 ಡಾಲರ್ ವಿದೇಶಿ ಕರೆನ್ಸಿ ಕೂಡ ದಾಳಿ ವೇಳೆ ಪತ್ತೆಯಾಗಿದೆ. ಕರ್ನಾಟಕದ 10 ಮಂದಿ ಸೇರಿದಂತೆ ಒಟ್ಟು 44 ಏಜೆಂಟ್‌ಗಳನ್ನು ಎನ್‌ಐಎ ಬಂಧಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com