ಕಳ್ಳಾಟಕ್ಕೆ ಬ್ರೇಕ್: ಮೊಬೈಲ್ ಆ್ಯಪ್ ಆಧಾರಿತ ಕಚೇರಿ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿದ ಬಿಬಿಎಂಪಿ!

ಸಮಯಕ್ಕೆ ಸರಿಯಾಗಿ ಬಿಬಿಎಂಪಿ ಕಚೇರಿಗಳಿಗೆ ಅಧಿಕಾರಿ ಸಿಬ್ಬಂದಿ ಬರಲ್ಲ. ಇದರ ಒಟ್ಟಾರೆ ಪರಿಣಾಮ ಪಾಲಿಕೆ ಆಡಳಿತದ ಮೇಲಾಗುತ್ತಿದೆ, ನಾಗರೀಕರಿಗೂ ಅಗತ್ಯ ಸೌಕರ್ಯ ಕಲ್ಪಿಸಲು ತೊಂದರೆಯಾಗುತ್ತಿದೆ. ಈ ಸಮಸ್ಯೆಗಳ ದೂರಾಗಿಸಲು ಪಾಲಿಕೆಯು ಮೊಬೈಲ್ ಆ್ಯಪ್ ಆಧಾರಿತ ಬಯೋಮೆಟ್ರಿಕ್ ಹಾಜರಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಮಯಕ್ಕೆ ಸರಿಯಾಗಿ ಬಿಬಿಎಂಪಿ ಕಚೇರಿಗಳಿಗೆ ಅಧಿಕಾರಿ ಸಿಬ್ಬಂದಿ ಬರಲ್ಲ. ಇದರ ಒಟ್ಟಾರೆ ಪರಿಣಾಮ ಪಾಲಿಕೆ ಆಡಳಿತದ ಮೇಲಾಗುತ್ತಿದೆ, ನಾಗರೀಕರಿಗೂ ಅಗತ್ಯ ಸೌಕರ್ಯ ಕಲ್ಪಿಸಲು ತೊಂದರೆಯಾಗುತ್ತಿದೆ. ಈ ಸಮಸ್ಯೆಗಳ ದೂರಾಗಿಸಲು ಪಾಲಿಕೆಯು ಮೊಬೈಲ್ ಆ್ಯಪ್ ಆಧಾರಿತ ಬಯೋಮೆಟ್ರಿಕ್ ಹಾಜರಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಮೊಬೈಲ್ಆ್ಯಪ್ ನಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶಿಸಿದ್ದಾರೆ.

ಬಿಬಿಎಂಪಿಯ ಕೇಂದ್ರ ಕಚೇರಿ ಸೇರಿದಂತೆ ಎಲ್ಲಾ ಎಂಟು ವಲಯಗಳಲ್ಲಿ ಸಿಬ್ಬಂದಿಯ ಹಾಜರಾತಿಯನ್ನು ಮೊಬೈಲ್ ಆ್ಯಪ್ ಬಯೋಮೆಟ್ರಿಕ್ ಮೂಲದ ದಾಖಲಿಸಲು ಸೂಚನೆ ನೀಡಲಾಗಿದೆ. ಪಾಲಿಕೆಯ ಕೇಂದ್ರ ಕಛೇರಿ ಹಾಗೂ ಎಲ್ಲಾ ವಲಯಗಳ ಅಧಿಕಾರಿ ಮತ್ತು ಸಿಬ್ಬಂದಿ ಲಾಗ್ ಸೇಫ್ ಸಂಸ್ಥೆಯವರು ಅಭಿವೃದ್ಧಿ ಪಡಿಸಿರುವ ಮೊಬೈಲ್ ಆ್ಯಪ್‌ನಲ್ಲಿ ಲಾಗಿನ್ ಮಾಡಿಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕೆಲವು ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಮೊಬೈಲ್ ಆ್ಯಪ್ ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಅಧಿಕಾರಿ ಸಿಬ್ಬಂದಿ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಲಾಗಿನ್ ಆಗಿ ಬೆಳಗ್ಗೆ 10 ರೊಳಗೆ ಹಾಜರಾತಿ ನಮೂದಿಸಬೇಕು.

ಈಗಾಗಲೇ ಲಾಗಿನ್ ಐಡಿಗಳನ್ನು ವಲಯ ಆಯುಕ್ತರುಗಳಿಗೆ ಹಸ್ತಾಂತರಿಸಿದ್ದು, ವಲಯದಲ್ಲಿ ಸ್ಥಳ ಭೇಟಿ, ಪರಿಶೀಲನೆಯ ಲಾಗಿನ್ ಮತ್ತು ಲಾಗ್ ಔಟ್ ಸಮಯವನ್ನು ವಲಯ ಆಯುಕ್ತರು ನಿರ್ಧರಿಸಿ ಮೊಬೈಲ್ ಆ್ಯಪ್ ಮುಖಾಂತರ ಹಾಜರಾತಿಯನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಇದರಿಂದಾಗಿ ಪರಿಶೀಲನೆ, ಫಿಲ್ಡ್ ವಿಸಿಟ್ ಹೆಸರಲ್ಲಿ ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳಲ್ಲಿ ತೊಡಗುವ ಅಧಿಕಾರಿ ಮತ್ತು ಸಿಬ್ಬಂದಿಯ ಆಟಕ್ಕೆ ಮುಖ್ಯ ಆಯುಕ್ತರು ಬ್ರೇಕ್ ಹಾಕಿದ್ದಾರೆ.

ಕಛೇರಿ ಅವಧಿಯ ಮುಕ್ತಾಯ ಸಂಜೆ 5.30ರ ನಂತರ ಮೊಬೈಲ್ ಆಪ್‌ನಲ್ಲಿ ಲಾಗ್ ಔಟ್ ಮಾಡಿಕೊಂಡು ಹಾಜರಾತಿಯನ್ನು ದೃಢೀಕರಿಸಬೇಕು. ಆದರೆ, ಕಛೇರಿ ಅವಧಿ ಮುಕ್ತಾಯಕ್ಕೆ ಮುಂಚಿತವಾಗಿ ಮೊಬೈಲ್ ಆ್ಯಪ್‌ನಲ್ಲಿ ಲಾಗ್ ಔಟ್ ಮಾಡಿರುವುದನ್ನು ಪರಿಗಣಿಸಬಾರದು ಎಂದು ಅವರು ಸಂಬಂಧಿಸಿದ ಸಂಬಳ ನೀಡುವ ಅಧಿಕಾರಿ, ಕಚೇರಿ ಮುಖ್ಯಸ್ಥರಿಗೆ ಸುತ್ತೋಲೆಯ ಮೂಲಕ ವಿವರಿಸಿದ್ದಾರೆ.

ಮೊಬೈಲ್ ಆ್ಯಪ್ ಬಯೋಮೇಟ್ರಿಕ್ ಮುಖಾಂತರ ಹಾಜರಾತಿ ಸಲ್ಲಿಸುತ್ತಿರುವ ಬಗ್ಗೆ ದೃಢೀಕರಿಸಿಕೊಂಡು ವೇತನ ಪಾವತಿ ಇಲಾಖೆ ಮುಖ್ಯಸ್ಥರಿಗೆ, ವಲಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಂದರ್ಭಿಕ ರಜೆಗೂ ಮೊಬೈಲ್ ಆ್ಯಪ್‌ನಲ್ಲಿ ಮುಖಾಂತರ ದೃಢೀಕರಿಸಿ ರಜೆಯನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಈ ಹಿಂದೆ ಕೇಂದ್ರ ಕಚೇರಿ ಹಾಗೂ ಕೆಲವೊಂದು ವಲಯ ಕಚೇರಿಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಯಂತ್ರಗಳನ್ನು ಅಳವಡಿಸಿ ಆ ಮೂಲಕ ಹಾಜರಾತಿ ವ್ಯವಸ್ಥೆ ತರಲಾಗಿತ್ತು. ಕೆಲವು ಬಾರಿ ಕಚೇರಿ ನೌಕರರೇ ಬಯೋಮೆಟ್ರಿಕ್ ಯಂತ್ರದ ಬೆರಳಚ್ಚು ಇಡುವ ಸೆನ್ಸಾರ್ ಭಾಗವನ್ನು ಹಾಳುಗೆಡವಿ, ಆ ಯಂತ್ರ ಕಾರ್ಯನಿರ್ವಹಿಸದಂತೆ ಮಾಡುತ್ತಿದ್ದರು. ಹೀಗೆ ಹಾಳಾದ ಯಂತ್ರ ಸರಿಪಡಿಸಲು ಹಾಗೂ ಯಂತ್ರ ನಿರ್ವಹಣೆಗೆ ಸೂಕ್ತ ಆರ್ಥಿಕ ಸಂಪನ್ಮೂಲ ನಿಗದಿ ಮಾಡದ ಕಾರಣ ಆ ವ್ಯವಸ್ಥೆಯು ಅರ್ಧಕ್ಕೆ ನಿಂತು ಹೋಗಿತ್ತು. ಹೀಗಾಗಿ ತಮಗಿಷ್ಟ ಬಂದಂತೆ ಅಧಿಕಾರಿ, ಸಿಬ್ಬಂದಿ ಕಚೇರಿಗೆ ಬಂದು ಹೋಗುತ್ತಿದ್ದರು. ಈ ಎಲ್ಲಾ ಬೇಜವಾಬ್ದಾರಿತನಕ್ಕೆ ಬಿಬಿಎಂಪಿ ಇದೀಗ ಬ್ರೇಕ್ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com