ಬೆಂಗಳೂರು: ಬೆಂಗಳೂರಿನ ಶಿವಾಜಿನಗರದಲ್ಲಿ ನರ್ಸರಿ ಶಾಲೆ ಕಟ್ಟಡವೊಂದು ಕುಸಿದುಬಿದ್ದಿದ್ದು, ಕೆಲವೇ ಗಂಟೆಗಳ ಅಂತರದಲ್ಲಿ 80ಕ್ಕೂ ಹೆಚ್ಚು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿರುವ ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ ಜಾವ ನಸುಕಿನ ಜಾವ ಬಿದ್ದಿದ್ದು, ಶಾಲೆ ಅವರಣದಲ್ಲಿ ನಿಲ್ಲಿಸಲಾಗಿದ್ದ ಹತ್ತಾರ ವಾಹನಗಳು ಅವಶೇಷಗಳಡಿ ಸಿಲುಕಿ ನಜ್ಜುಗುಜ್ಜಾಗಿವೆ.
ದುರಂತ ರಾತ್ರಿ ಸಂಭವಿಸಿದ್ದರಿಂದ ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇರಲಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸ್ಥಳೀಯ ನಿವಾಸಿಗಳು ನೀಡಿರುವ ಮಾಹಿತಿ ಪ್ರಕಾರ ಈ ಶಾಲೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಒಂದು ವೇಳೆ ಕಟ್ಟಡ ಶಾಲಾ ಸಮಯದಲ್ಲಿ ಕುಸಿದಿದ್ದರೆ ಮಕ್ಕಳ ಗತಿ ಏನು? ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೂ ಸಹ ಇಲ್ಲೇ ಶಾಲೆ ನಡೆಸುತ್ತಿರುವುದು ಎಷ್ಟು ಸರಿ? ಎಂದು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಶಾಲೆಗೆ ಸುಮಾರು 75 ವರ್ಷಗಳ ಇತಿಹಾಸವಿದ್ದು, ಬಹಳ ವರ್ಷಗಳಿಂದಲೇ ಈ ಕಟ್ಟಡ ಕುಸಿಯುವ ಭೀತಿಯಲ್ಲಿತ್ತು ಎಂದು ಹೇಳಿದ್ದಾರೆ. ಪ್ರಸ್ತುತ ಬಿಬಿಎಂಪಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಅವಶೇಷಗಳನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅಂತೆಯೇ ಇಲ್ಲಿ ಕಲಿಯುತ್ತಿದ್ದ ಶಾಲಾ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಸ್ಥಳೀಯ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಭರವಸೆ ನೀಡಿದ್ದಾರೆ.
Advertisement