BMTC ಬಸ್ ನಲ್ಲೂ ಯುವತಿಗೆ ಲೈಂಗಿಕ ಕಿರುಕುಳ ಆರೋಪ, ಕಂಡಕ್ಟರ್ ಮೊಬೈಲ್ ನಲ್ಲಿ ಯುವತಿಯರ ವಿಡಿಯೋ!

ಲುಲು ಮಾಲ್, ಮೆಟ್ರೋ ರೈಲಿನ ಬಳಿಕ ಇದೀಗ ಬಿಎಂಟಿಸಿ ಬಸ್ ನಲ್ಲೂ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಕಿರುಕುಳ ನೀಡಿದ್ದ ಕಂಡಕ್ಟರ್ ಮೊಬೈಲ್ ನಲ್ಲಿ ಯುವತಿಯರ ವಿಡಿಯೋಗಳು ಇತ್ತು ಎನ್ನಲಾಗಿದೆ.
ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ
ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ
Updated on

ಬೆಂಗಳೂರು: ಲುಲು ಮಾಲ್, ಮೆಟ್ರೋ ರೈಲಿನ ಬಳಿಕ ಇದೀಗ ಬಿಎಂಟಿಸಿ ಬಸ್ ನಲ್ಲೂ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಕಿರುಕುಳ ನೀಡಿದ್ದ ಕಂಡಕ್ಟರ್ ಮೊಬೈಲ್ ನಲ್ಲಿ ಯುವತಿಯರ ವಿಡಿಯೋಗಳು ಇತ್ತು ಎನ್ನಲಾಗಿದೆ.

ಹೌದು.. ಕಳೆದ ಅ.19ರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮೂಲಗಳ ಪ್ರಕಾರ ರಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಶಿವಾಜಿನಗರದಿಂದ ಕೆ.ಆರ್‌.ಪುರ ಕಡೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್‌ನಲ್ಲಿ ರಶ್‌ ಇಲ್ಲದಿದ್ದರೂ ರಮ್ಯ ಕುಳಿತಿದ್ದ ಸೀಟಿಗೆ ಒರಗಿಕೊಂಡು ಮೈಯನ್ನು ಉಜ್ಜಿ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ರಮ್ಯ ಸಾರಿಗೆ ನಿಗಮಕ್ಕೆ ಇ-ಮೇಲ್‌ ಮೂಲಕ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ ವಿರುದ್ಧ ದೂರು ನೀಡಿದ್ದಾರೆ.

ಕಂಡಕ್ಟರ್ ಅಮಾನತು
ಯುವತಿಯ ದೂರಿನ ಹಿನ್ನೆಲೆ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿಗಳಿಂದ ಆ ಕಂಡಕ್ಟರ್​ನ ವಿಚಾರಣೆ ಮಾಡಿದ್ದಾರೆ. ಲೈಂಗಿಕ ಕುರುಕುಳ ನೀಡಿದ ಕಂಡಕ್ಟರ್ ನನ್ನು ಕೆಂಪಣ್ಣ ಎಂದು ಗುರುತಿಸಲಾಗಿದ್ದು, ತನಿಖೆಯ ವೇಳೆ ಕಂಡಕ್ಟರ್ ಕೆಂಪಣ್ಣ ತಪ್ಪೊಪ್ಪಿಕೊಂಡಿದ್ದಾನೆ. ತಪ್ಪು ಒಪ್ಪಿಕೊಂಡ ಹಿನ್ನೆಲೆ ಬಸ್​ ಕಂಡಕ್ಟರ್ ಕೆಂಪಣ್ಣ ಅವರನ್ನ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ.

ಕಂಡಕ್ಟರ್ ಮೊಬೈಲ್ ನಲ್ಲಿ ಯುವತಿಯರ ವಿಡಿಯೋಗಳು
ವಿಚಾರಣೆ ವೇಳೆ ಕಂಡಕ್ಟರ್​ ಮೊಬೈಲ್ ಪರೀಶಿಲಿಸಿದಾಗ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರಂತೆ. ಯಾಕಂದ್ರೆ ಆ ಕಂಡಕ್ಟರ್​ ಫೋನ್​ನಲ್ಲಿ ಮಹಿಳೆಯರು, ಯುವತಿಯರನ್ನು ಗೌಪ್ಯವಾಗಿ ಸೆರೆ ಹಿಡಿದಿರುವ ಫೋಟೋ ಮತ್ತು ವಿಡಿಯೋಗಳು ಇದ್ದವು ಎಂದು ಗೊತ್ತಾಗಿದೆ. ಕಂಡಕ್ಟರ್‌ ಕೆಂಪಣ್ಣ ಲೈಂಗಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೆ, ಬಸ್‌ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಫೋಟೊ, ವಿಡಿಯೋವನ್ನು ಗೌಪ್ಯವಾಗಿ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತವಾಗಿ ನಡೆದುಕೊಂಡಿದ್ದಾನೆ. 

ಇತ್ತೀಚೆಗೆ ಲುಲು ಮಾಲ್ ನಲ್ಲಿ ವೃತ್ತಿಯ ಶಿಕ್ಷಕನಾಗಿರುವ ಹಿರಿಯ ವ್ಯಕ್ತಿ ಯುವತಿಯ ಮೈಮುಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಮ್ಮ ಮೆಟ್ರೋ ರೈಲಿನಲ್ಲೂ ಇಂತಹುದೇ ಘಟನೆ ವರದಿಯಾಗಿತ್ತು. ಈ ಎರಡೂ ಪ್ರಕರಣಗಳು ಹಸಿರಾಗಿರುವಂತೆಯೇ ಮತ್ತೊಂದು ಅಂತಹುದೇ ಪ್ರಕರಣ ವರದಿಯಾಗಿದ್ದು, ಬೆಂಗಳೂರಿನ ಮಾನ ಹರಾಜಾಗುವಂತೆ ಮಾಡಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com