ಜಿಲ್ಲೆಗಳಿಗೆ ಭೇಟಿ ನೀಡಿ, ಅಪರಾಧ ಪ್ರಕರಣಗಳ ಪರಿಶೀಲಿಸಿ: ಎಡಿಜಿಪಿ, ಐಜಿಪಿಗಳಿಗೆ ಅಲೋಕ್ ಮೋಹನ್ ಸೂಚನೆ

ಪೊಲೀಸ್‌ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ಎಡಿಜಿಪಿ ಮತ್ತು ಐಜಿಪಿಗಳು ತಲಾ ಎರಡು ಜಿಲ್ಲೆಗಳಿಗೆ ಭೇಟಿ ನೀಡಿ ಆಡಳಿತಾತ್ಮಕ ವಿಷಯಗಳು ಮತ್ತು ಅಪರಾಧ ಪ್ರಕರಣಗಳನ್ನು ಪರಿಶೀಲನೆ ನಡೆಸಬೇಕೆಂದು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು ಸೂಚನೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೊಲೀಸ್‌ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ಎಡಿಜಿಪಿ ಮತ್ತು ಐಜಿಪಿಗಳು ತಲಾ ಎರಡು ಜಿಲ್ಲೆಗಳಿಗೆ ಭೇಟಿ ನೀಡಿ ಆಡಳಿತಾತ್ಮಕ ವಿಷಯಗಳು ಮತ್ತು ಅಪರಾಧ ಪ್ರಕರಣಗಳನ್ನು ಪರಿಶೀಲನೆ ನಡೆಸಬೇಕೆಂದು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನೀಡಿದ ನಿರ್ದೇಶನಗಳ ಮೇರೆಗೆ ಪೊಲೀಸ್ ಠಾಣೆಗಳಲ್ಲಿನ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ವಿಭಾಗಗಳ ಕಾರ್ಯನಿರ್ವಹಣೆಯ ಪರಿಶೀಲನೆ ಮತ್ತು ಕ್ರಮಗಳನ್ನು ಒಳಗೊಂಡಿರುವ ಕಾರ್ಯಗಳ ಪಟ್ಟಿಯನ್ನು ಅಧಿಕಾರಿಗಳಿಗೆ ಅಲೋಕ್ ಮೋಹನ್ ಅವರು ನೀಡಿದ್ದಾರೆ.

ನನ್ನ ಪರವಾಗಿ ಎಡಿಜಿಪಿಗಳು ಮತ್ತು ಐಜಿಪಿಗಳು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, 10 ದಿನಗಳಲ್ಲಿ ವಿವರವಾದ ವರದಿಯನ್ನು ಸಿದ್ಧಪಡಿಸಿ, ತಿಂಗಳೊಳಗಾಗಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಅಧಿಕಾರಿಗಳು ತಮಗೆ ವಹಿಸಿರುವ ಘಟಕಗಳಿಗೆ ಎರಡು ದಿನ ಭೇಟಿ ನೀಡಬೇಕು. ಮೊದಲ ದಿನ, ಜಿಲ್ಲಾ ಪೊಲೀಸ್ ಕಚೇರಿ/ಪೊಲೀಸ್ ಕಮಿಷನರ್ ಕಚೇರಿಯನ್ನು ಪರಿಶೀಲಿಸಬೇಕು ಮತ್ತು ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ಮತ್ತು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆಯೇ ಮತ್ತು ಸಭೆಗಳನ್ನು ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೆ, ಎಸ್‌ಸಿ/ಎಸ್‌ಟಿ ಪ್ರಕರಣಗಳು ಮತ್ತು ಪೋಕ್ಸೊ ಪ್ರಕರಣಗಳ ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸುವುದನ್ನು ಪರಿಶೀಲಿಸಬೇಕು.

ಎರಡನೇ ದಿನ, ಜಿಲ್ಲೆ ಮತ್ತು ನಗರದಲ್ಲಿ ನಡೆದ ಅಪರಾಧ ಕೃತ್ಯಗಳ ಕುರಿತು ಸಭೆ ನಡೆಸಬೇಕು. ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಗಳು ಹಾಜರಾಗಬೇಕು.

ಸಭೆಯಲ್ಲಿ ರೌಡಿಸಂ, ಮಾದಕ ದ್ರವ್ಯ ದಂಧೆ ಮತ್ತು ಸಂಘಟಿತ ಅಪರಾಧಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸಬೇಕು ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳು ಮತ್ತು ಪೋಕ್ಸೊ ಪ್ರಕರಣಗಳನ್ನು ಪರಿಶೀಲಿಸಬೇಕು. ಅಲ್ಲದೆ, ಬಾಕಿ ಉಳಿದಿರುವ ಪ್ರಕರಣಗಳು, ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳು, ಬೀಟ್ ಕಾನ್‌ಸ್ಟೆಬಲ್‌ಗಳು ಜನರೊಂದಿಗೆ ಸಂವಹನ ನಡೆಸುವುದು ಮತ್ತು ಕಳ್ಳತನ ಪ್ರಕರಣಗಳಲ್ಲಿ ಸ್ವತ್ತು ವಸೂಲಿ ಮಾಡಬೇಕೆಂದು ಸೂಚಿಸಿದರು.

ಕ್ರೈಮ್ ಆಫೀಸರ್ಸ್ ಮತ್ತು ಮೊಬೈಲ್ ಫೋರೆನ್ಸಿಕ್ ವಾಹನಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತತಿದ್ದಾರೆಂಬುದನ್ನು ಪರಿಶೀಲಿಸಬೇಕು. ಅಪರಾಧ ಕೃತ್ಯಗಳಿಗೆ ಶಿಕ್ಷೆಯ ಪ್ರಮಾಣ, ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com