ಉದ್ಯೋಗ ಅರಸಿ ಭಾರತೀಯರು ಇಸ್ರೇಲ್'ಗೆ ಪ್ರಯಾಣಿಸುವುದೇಕೆ? ಅಲ್ಲಿ ಸಿಗುವ ಸವಲತ್ತುಗಳಾದರೂ ಏನು?

ಹಮಾಸ್ ಉಗ್ರಗಾಮಿಗಳ ದಾಳಿಯಿಂದ ಇತ್ತೀಚೆಗೆ ಗಾಜಾಪಟ್ಟಿಯಲ್ಲಿ ನಡೆದ ಸಂಘರ್ಷ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಬೆದರಿಕೆಗೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ. ಈ ಬೆಳವಣಿಗೆ ವಿಶ್ವಾದ್ಯಂತ ಕಳವಳವನ್ನು ಉಂಟುಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಮಾಸ್ ಉಗ್ರಗಾಮಿಗಳ ದಾಳಿಯಿಂದ ಇತ್ತೀಚೆಗೆ ಗಾಜಾಪಟ್ಟಿಯಲ್ಲಿ ನಡೆದ ಸಂಘರ್ಷ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಬೆದರಿಕೆಗೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ. ಈ ಬೆಳವಣಿಗೆ ವಿಶ್ವಾದ್ಯಂತ ಕಳವಳವನ್ನು ಉಂಟುಮಾಡಿದೆ.

ಈ ಬಿಕ್ಕಟ್ಟು ಇಸ್ರೇಲ್‌ನಲ್ಲಿ ವಾಸಿಸುವ ಭಾರತೀಯ ವಲಸಿಗರ ಯೋಗಕ್ಷೇಮದ ಬಗ್ಗೆ ಕೂಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಇಸ್ರೇಲ್ ನಲ್ಲಿ 18,000 ಕ್ಕೂ ಹೆಚ್ಚು ಭಾರತೀಯರು ಕೆಲಸ ಮಾಡುತ್ತಿದ್ದು, ಈ ಪೈಕಿ ಸುಮಾರು 14,000 ಮಂದಿ, ವೃದ್ಧರಿಗೆ ಆರೈಕೆ ಮಾಡುವವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತದಿಂದ ಇಸ್ರೇಲ್‌ಗೆ ಈ ಆರೈಕೆದಾರರ ಪ್ರಯಾಣವು ಉದ್ಯೋಗದ ಮಾರ್ಗ ಮಾತ್ರವಲ್ಲದೆ ಇಸ್ರೇಲ್‌ನಲ್ಲಿ ವೃದ್ಧರು ಮತ್ತು ಅಂಗವಿಕಲರಿಗೆ ಪ್ರಮುಖ ಬೆಂಬಲವನ್ನು ನೀಡುವ ಅವಕಾಶವಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಕೇರ್‌ ಟೇಕರ್‌ಗಳಿಗೆ ಬಹು ಬೇಡಿಕೆ ಇದೆ, ಹಾಗೂ ನರ್ಸಿಂಗ್ ಪ್ರಪಂಚದಾದ್ಯಂತದ ಭಾರತೀಯರಿಗೆ ವೃತ್ತಿ ಅವಕಾಶಗಳನ್ನು ನೀಡುತ್ತದೆ. ಇಸ್ರೇಲ್‌ನಲ್ಲಿಯೂ ಕೂಡ ಕೇರ್‌ ಟೇಕರ್‌ಗಳಿಗೆ ಬಹು ಬೇಡಿಕೆ ಇದೆ. ಇಲ್ಲಿ ವಿಶೇಷವಾಗಿ ಆಕರ್ಷಕವಾಗಿಸುವುದು ಕೇರ್‌ ಟೇಕರ್‌ಗಳ ಸಂಬಳ ಮತ್ತು ಇತರ ಪ್ರಯೋಜನಗಳು, ಅವುಗಳಲ್ಲಿ ಕೆಲವು ಇತರ ದೇಶಗಳಲ್ಲಿ ಲಭ್ಯವಿಲ್ಲ.

ಇಸ್ರೇಲ್‌ನಲ್ಲಿ ಆರೈಕೆ ಸೇವೆ ಸಲ್ಲಿರುವವರು ತಿಂಗಳಿಗೆ 5,300 ಇಸ್ರೇಲಿ ನ್ಯೂ ಶೇಕೆಲ್ (ಕನಿಷ್ಠ 1.10 ಲಕ್ಷ ರೂಪಾಯಿಗಳನ್ನು) ಗಳಿಸುತ್ತಾರೆ, ಜೊತೆಗೆ ಉಚಿತ ಆಹಾರ, ವಸತಿ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಯೋಜನಗಳನ್ನು ಪಡೆಯುತ್ತಾರೆ. ಓವರ್‌ಟೈಮ್ ಕೆಲಸಕ್ಕೆ ಹೆಚ್ಚುವರಿ ವೇತನವನ್ನೂ ನೀಡಲಾಗುತ್ತದೆ.

ಇಸ್ರೇಲ್‌ನಲ್ಲಿ ಆರೈಕೆದಾರರು ಸಾಮಾನ್ಯವಾಗಿ ನಾಲ್ಕು ವರ್ಷಗಳು ಮತ್ತು ಮೂರು ತಿಂಗಳವರೆಗೆ ಮಾನ್ಯವಾಗಿರುವ ವೀಸಾಗಳನ್ನು ಹೊಂದಿರುತ್ತಾರೆ. ನಂತರ ಅದನ್ನು ವಿಸ್ತರಿಸಬಹುದು ಅಥವಾ ನವೀಕರಿಸಬಹುದು. ಅವರ ವೀಸಾ ಅವಧಿ ಮುಗಿದಾಗ, ಆರೈಕೆದಾರರು ತಮ್ಮ ಕೆಲಸದ ಅವಧಿಯನ್ನು ಆಧರಿಸಿ ಒಂದು ದೊಡ್ಡ ಮೊತ್ತವನ್ನು ಸಂಪಾದಿಸಿರುತ್ತಾರೆ. ಹೀಗಾಗಿ ಉದ್ಯೋಗ ಅರಸಿ ಸಾಕಷ್ಟು ಮಂದಿ ಭಾರತೀಯರು ಇಸ್ರೇಲ್'ಗೆ ಪ್ರಯಾಣಿಸುತ್ತಾರೆ.

ಮಂಗಳೂರಿನಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸತ್ತಿದ್ದ ಸಿಸಿಲಿಯಾ (ಹೆಸರು ಬದಲಿಸಲಾಗಿದೆ) ಅವರಿಗೆ, ಮನೆ ಮಾಲೀಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಅವರು 20 ವರ್ಷಗಳ ಹಿಂದೆ ಕೆಲಸ ಬಿಟ್ಟು, ಇಸ್ರೇಲ್ ಪ್ರಯಾಣಿಸಿದ್ದರು. ಅಲ್ಲಿ ಆರೈಕೆದಾರಳಾಗಿ ಕೆಲಸ ಮಾಡುತ್ತಿದ್ದರು. ಇದಕ್ಕಾಗಿ ಅವರ ಖರ್ಚು ಮಾಡಿದ್ದು, ರೂ.1 ಲಕ್ಷವಷ್ಟೇ. ಆದರೆ, ಇಂದು ಮಂಗಳೂರಿನಲ್ಲಿ ಫ್ಲ್ಯಾಟ್ ಮತ್ತು ಬೆಳ್ತಂಗಡಿಯಲ್ಲಿ 5 ಎಕರೆ ಜಮೀನಿನ ಮಾಲೀಕರಾಗಿದ್ದಾರೆ. ಇವರ ಇಬ್ಬರು ಮಕ್ಕಳೂ ಕೆನಡಾದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.

ಸಿಸಿಲಿಯಾ ಅವರಂತೆಯೇ ಸಾಕಷ್ಟು ಮಂದಿ ಬಡತನದಿಂದ ಹೊರಬರಲು ಇಸ್ರೇಲ್ ಪ್ರಯಾಣಿಸುತ್ತಿದ್ದಾರೆ. ಆದರೆ, ಇದಕ್ಕಾಗಿ ಅವರು ರೂ.30-35 ಲಕ್ಷ ವ್ಯಯಿಸಬೇಕಾಗಿದೆ. ಸಾಕಷ್ಟು ಮಂದಿ ಇದಕ್ಕೆ ಸಿದ್ಧವಾಗಿಯೂ ಇದ್ದು, ಆಸ್ತಿಯನ್ನು ಅಡಮಾನವಿಟ್ಟು, ಸಾಲ ಪಡೆದುಕೊಳ್ಳುತ್ತಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಧ್ಯಮ ಹಾಗೂ ಬಡ ಕುಟುಂಬಗಳ ಕಾರ್ಮಿಕರಿಗೆ ಇಸ್ರೇಲ್ ನಲ್ಲಿ ಸಾಕಷ್ಟು ಬೇಡಿಕೆ ಇದ್ದು, ಇಸ್ರೇಲ್ ನಲ್ಲಿರುವ ಆಕರ್ಷಕ ವೇತನ, ಧಾರ್ಮಿಕ, ಸಾಂಸ್ಕೃತಿ ಸ್ವಾತಂತ್ರ್ಯ, ಘನತೆ, ಹಾಗೂ ಮಹಿಳೆಯರಿಗೆ ನೀಡುವ ಸುರಕ್ಷತೆ ಇವರನ್ನು ಹೆಚ್ಚು ಆಕರ್ಷಣೆಗೊಳಗಾಗುವಂತೆ ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com