ಬೆಂಗಳೂರಿನಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರು ಯುವಕರು ಸೇರಿದಂತೆ ಮೂವರು ಸಾವು!

ಬೆಂಗಳೂರಿನ ವಿವಿಧೆಡೆ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೀಡಾಗಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಯುವಕರು ಮತ್ತು 60 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಒಂದು ಕಪ್ ಚಹಾಕ್ಕಾಗಿ ಹೊರಟ 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅಭಿಷೇಕ್‌ ದುಬಾರಿ ಬೆಲೆ ತೆರುವಂತಾಗಿದೆ. ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ಸ್ನೇಹಿತ ಅಜಿತ್ (23) ಜತೆ ಚಹಾ ಕುಡಿಯಲು ಅತ್ತಿಬೆಲೆಗೆ ತೆರಳಿದ್ದರು. ವರ್ತೂರಿನಿಂದ ಗುಂಜೂರು ಮಾರ್ಗವಾಗಿ ಅತ್ತಿಬೆಲೆಗೆ ತೆರಳುತ್ತಿದ್ದಾಗ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಅಭಿಷೇಕ್ ರಸ್ತೆಗೆ ಬಿದ್ದಿದ್ದಾರೆ.

ಅವರ ಹಿಂದೆಯೇ ಬಂದ ಕಾರು ಅಭಿಷೇಕ್‌ನ ತಲೆಯ ಮೇಲೆ ಹರಿದಿದ್ದು, ಸ್ಥಳದಲ್ಲೇ ಅವರು ಸಾವಿಗೀಡಾಗಿದ್ದಾರೆ. ಇದೇ ವೇಳೆ ಅಜಿತ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರಿಬ್ಬರು ಹೆಲ್ಮೆಟ್ ಧರಿಸದೆ ಅತಿವೇಗದಿಂದ ಬೈಕ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಮಿಳುನಾಡಿನ ಧರ್ಮಪುರಿ ಮೂಲದ ಅಭಿಷೇಕ್ ಮತ್ತು ಅಜಿತ್ ವರ್ತೂರಿನಲ್ಲಿ ನೆಲೆಸಿದ್ದರು.

ಯುವಕ ಸಾವು

ಪೀಣ್ಯ ಟ್ರಾಫಿಕ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ 24 ವರ್ಷದ ಯುವಕ ಅಜಾಗರೂಕ ಚಾಲನೆಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತನನ್ನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಪತ್‌ಕುಮಾರ್ ಎಂದು ಗುರುತಿಸಲಾಗಿದ್ದು, ಹೆಗ್ಗನಹಳ್ಳಿ ಬಳಿ ಭಾನುವಾರ ಬೆಳಗಿನ ಜಾವ 1.30ರ ಸುಮಾರಿಗೆ ಅವಘಡ ಸಂಭವಿಸಿದೆ. ದ್ವಿಚಕ್ರ ವಾಹನವನ್ನು ಅತಿವೇಗವಾಗಿ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ದಾರಿಹೋಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಅದೇ ದಿನ ಬೆಳಗ್ಗೆ 10.40ರ ಸುಮಾರಿಗೆ ಮಡಿವಾಳ ಸಂಚಾರ ಪೊಲೀಸ್‌ ವ್ಯಾಪ್ತಿಯ ಆಂಜನೇಯ ಪ್ರತಿಮೆ ಬಳಿ ಹೊಸೂರು ಮುಖ್ಯರಸ್ತೆ ದಾಟುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ಧನರಾಜ್ ಎಂದು ಗುರುತಿಸಲಾಗಿದ್ದು, ರಸ್ತೆ ದಾಟುತ್ತಿದ್ದ ಅವರನ್ನು ಕಂಡ ಆಟೋ ಹಠಾತ್ತನೆ ನಿಂತಿದೆ. ಆದರೆ, ಹಿಂದಿನಿಂದ ಬರುತ್ತಿದ್ದ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪಾದಚಾರಿಗಳಿಗೆ ತೀವ್ರ ಗಾಯಗಳಾಗಿವೆ.

ಧನರಾಜ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಟೋ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com