ಬೆಂಗಳೂರು: ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದ್ದು, ಈ ವೇಳೆ ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ವಿಜಯ್ ಕುಮಾರ್ (40) ಎಂದು ಗುರ್ತಿಸಲಾಗಿದೆ. ಶಿಕ್ಷಕರಾಗಿರುವ ಇವರು, ಕಳೆದ ಮೂರು ವರ್ಷಗಳಿಂದ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಚಿತ್ರದುರ್ಗದಿಂದ ಕಿದ್ವಾಯಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ನೆಲಮಂಗಲ ಸಮೀಪದ ಬೊಮ್ಮನಹಳ್ಳಿ ಸಮೀಪ ಅಪಘಾತ ಸಂಭವಿಸಿದೆ.
ಅಪಘಾತದ ವೇಳೆ ಆ್ಯಂಬುಲೆನ್ಸ್ ನಲ್ಲಿ ವಿಜಯ್ ಕುಮಾರ್ ಸೇರಿ ಒಟ್ಟು 6 ಮಂದಿ ಇದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಚಾಲಕ, ವಿಜಯ್ ಕುಮಾರ್ ಅವರ ನಾಲ್ವರು ಕುಟುಂಬಸ್ಥರು ಗಾಯಗೊಂಡಿದ್ದಾರೆ. ಗಾಯಾಳುಗಳು ನೆಲಮಂಗಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ನೆಲಮಂಗಲದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement