‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಗೆ ತಜ್ಞರ ಖಂಡನೆ

ಕೇಂದ್ರ ಸರ್ಕಾರ ಚರ್ಚಿಸುತ್ತಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಗೆ ಸಮಾಜಶಾಸ್ತ್ರಜ್ಞರು, ಹೋರಾಟಗಾರರು ಮತ್ತು ಕಾನೂನು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕೇಂದ್ರ ಸರ್ಕಾರ ಚರ್ಚಿಸುತ್ತಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಗೆ ಸಮಾಜಶಾಸ್ತ್ರಜ್ಞರು, ಹೋರಾಟಗಾರರು ಮತ್ತು ಕಾನೂನು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಮುಝಾಫರ್ ಅಸ್ಸಾದಿ ಅವರು ಮಾತನಾಡಿ, ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ನೇತೃತ್ವ ವಹಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಮನಾಥ್ ಕೋವಿಂದ್ ಅವರು ಸಂವಿಧಾನ ಪಾಲಕರಾಗಿದ್ದರು. ಕೇಂದ್ರ ಸರ್ಕಾರ ಅವರ ಸ್ಥಾನಮಾನವನ್ನು ಕಡಿಮೆ ಮಾಡಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತದಾದ್ಯಂತ ಒಂದೇ ದಿನದಲ್ಲಿ ಮತದಾರರು ಸಂಸದರು ಮತ್ತು ಶಾಸಕರಿಗೆ ಮತ ಹಾಕುವ ಮೂಲಕ ಚುನಾವಣಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಸಮಯವನ್ನು ಉಳಿಸಲು ಈ ಪರಿಕಲ್ಪನೆಯನ್ನು ಮುಂದಿಡಲಾಗುತ್ತಿದೆ, ಆದರೆ, ಇದು ತುಂಬಾ ಅಪಾಯಕಾರಿಯಾಗಿದೆ. ಒಂದು ವೇಳೆ ಜನವಿರೋಧಿ ಸರಕಾರ ಅಧಿಕಾರಕ್ಕೆ ಬಂದರೆ ನಾಗರಿಕರು ಐದು ವರ್ಷ ಸಹಿಸಿಕೊಳ್ಳಬೇಕಾಗುತ್ತದೆ. ಈ ಕ್ರಮವು ವೈವಿಧ್ಯತೆ, ರಾಜ್ಯಗಳ ಸ್ವಾತಂತ್ರ್ಯ, ಬಹು ಪ್ರಾತಿನಿಧ್ಯಗಳನ್ನು ನಾಶಪಡಿಸುತ್ತದೆ ಮತ್ತು ಅಂತಿಮವಾಗಿ ಚುನಾವಣಾ ವ್ಯವಸ್ಥೆಯನ್ನು ನಾಶಪಡಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜು ಅವರೂ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ವಿವರವಾಗಿ ಚರ್ಚಿಸಬೇಕು. ಈಗಾಗಲೇ ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ವಿವಿಧ ದೇಶಗಳ ಸಾಂವಿಧಾನಿಕ ನಿಬಂಧನೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಹೀಗಾಗಿ ಭಾರತದಲ್ಲಿ ‘ಒಂದು ರಾಷ್ಟ್ರ ಮತ್ತು ಒಂದು ಚುನಾವಣೆ’ ಕಾರ್ಯಸಾಧುವಲ್ಲ’ ಎಂದು ತಿಳಿಸಿದ್ದಾರೆ.

ಈ ನಡುವೆ ಸುಪ್ರೀಂ ಕೋರ್ಟ್‌ನ ಹಿರಿಯ ಕಾನೂನು ಸಲಹೆಗಾರ ಎಂಟಿ ನಾಣಯ್ಯ ಅವರು, ಈ ಪರಿಕಲ್ಪಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕೇವಲ ಚುನಾವಣಾ ವೆಚ್ಚವನ್ನು ಉಳಿಸುವುದಲ್ಲದೆ ಮಾನವಶಕ್ತಿಯನ್ನು ಉಳಿಸುತ್ತದೆ. ಜೊತೆಗೆ ಚುನಾವಣಾ ಆಯೋಗದ ಮೇಲಿನ ಒತ್ತಡವನ್ನೂ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ಚುನಾವಣೆ ವೇಳೆ ಕೆಲಸಕ್ಕೆ ರಜೆ ಹಾಕಿ ಇತರೆ ರಾಜ್ಯಗಳಿಗೆ ಜನರು ತೆರಳುತ್ತಿದ್ದರು. ಒಂದು ರಾಷ್ಟ್ರ, ಒಂದು ಚುನಾವಣೆ ಬಂದರೆ ಲೋಕಸಭಾ ಚುನಾವಣೆ ವೇಳೆಯೇ ರಾಜ್ಯ ವಿಧಾನಸಭಾ ಚುನಾವಣೆಗೂ ಮತದಾನ ಮಾಡಬಹುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com