ರಾಜಕಾಲುವೆ, ಕೆರೆ ಒತ್ತುವರಿ ಪ್ರಕರಣ: ತೆರವುಗೊಳಿಸಲು ಕಾಲಾನುಕ್ರಮ ರೂಪಿಸಿ ಹೈಕೋರ್ಟ್'ಗೆ ಕ್ರಿಯಾಯೋಜನೆ ಸಲ್ಲಿಸಿದ ಬಿಬಿಎಂಪಿ

ನಗರದಲ್ಲಿನ ರಾಜಕಾಲುವೆಗಳು ಮತ್ತು ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿಯು ಕಾಲಾನುಕ್ರಮ ಸೇರಿದಂತೆ ಕ್ರಿಯಾಯೋಜನೆ ರೂಪಿಸಿದ್ದು ಸೋಮವಾರ ಹೈಕೋರ್ಟ್‌ಗೆ 2 ಅನುಪಾಲನಾ ವರದಿಗಳನ್ನು ಸಲ್ಲಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿನ ರಾಜಕಾಲುವೆಗಳು ಮತ್ತು ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿಯು ಕಾಲಾನುಕ್ರಮ ಸೇರಿದಂತೆ ಕ್ರಿಯಾಯೋಜನೆ ರೂಪಿಸಿದ್ದು ಸೋಮವಾರ ಹೈಕೋರ್ಟ್‌ಗೆ 2 ಅನುಪಾಲನಾ ವರದಿಗಳನ್ನು ಸಲ್ಲಿಸಿದೆ.

ಬೆಂಗಳೂರಿನ ಸಿಟಿಜನ್‌ ಆಕ್ಷನ್‌ ಗ್ರೂಪ್‌ ಸೇರಿದಂತೆ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸುದೀರ್ಘ ವಿಚಾರಣೆ ನಡೆಸಿತು.

ಕೆರೆಗಳ ಅತಿಕ್ರಮಣ ತೆರವಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಲು ಹೈಕೋರ್ಟ್‌ ನೀಡಿದ್ದ ಸೂಚನೆಯಂತೆ ಬಿಬಿಎಂಪಿ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಇದರ ಪ್ರಕಾರ ವಾರದಲ್ಲಿ 10 ಕೆರೆಗಳ ಒತ್ತುವರಿ ತೆರವಿಗೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳು ಇದ್ದು, ಈ ಪೈಕಿ 24 ಕೆರೆಗಳನ್ನು ಒತ್ತುವರಿಯಿಂದ ಮುಕ್ತಿಗೊಳಿಸಲಾಗಿದೆ. 19 ಬಳಕೆಯಾಗದ ಕೆರೆಗಳಿವೆ ಎಂದು ವಿವರಿಸಲಾಗಿದೆ.

ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಬಿಬಿಎಂಪಿಯು ಕಾಲಾನುಕ್ರಮ (ಟೈಮ್‌ಲೈನ್‌)‌ ರೂಪಿಸಿದ್ದು, ಇದರ ಪ್ರಕಾರ ಮಾಹಿತಿ ಸ್ವೀಕರಿಸಿದ ಏಳು ದಿನಗಳ ಒಳಗೆ ಸಕ್ಷಮ ಪ್ರಾಧಿಕಾರದಲ್ಲಿ ದೂರು ದಾಖಲಿಸಬೇಕು. ಆನಂತರ ಸಕ್ಷಮ ಪ್ರಾಧಿಕಾರವು ತಹಶೀಲ್ದಾರ್‌ ಕಡೆಯಿಂದ ಮುಂದಿನ ಏಳು ದಿನಗಳ ಸಮೀಕ್ಷೆ ನಡೆಸಲಿದ್ದು, ಬಳಿಕ ತಹಶೀಲ್ದಾರ್‌ ಏಳು ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಅದಾದ ನಂತರ 15 ದಿನಗಳ ಕಾಲಾವಕಾಶ ನೀಡಿ ಒತ್ತುವರಿಗೆ ತೆರವಿಗೆ ನೋಟಿಸ್‌ ಜಾರಿ ಮಾಡಲಾಗುತ್ತದೆ. ಈ ಮಧ್ಯೆ, ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಮಿತಿ ನಿಗದಿಗೊಳಿಸಲಾಗಿದೆ. ಕಾಲಮಿತಿ ಗಡುವು ಮುಗಿದ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ವರದಿಯಲ್ಲಿ ಬಿಬಿಎಂಪಿ ಹೇಳಿತ್ತು.

ಇಂದು ವಿಚಾರಣೆಯ ವೇಳೆ ಪೀಠವು ಕಾಲಮಿತಿಯಲ್ಲಿ ಬದಲಾವಣೆ ಮಾಡಿದ್ದು, "ಮಾಹಿತಿ ಆಧರಿಸಿ ದೂರು ದಾಖಲಿಸುವುದನ್ನು ಏಳು ದಿನಗಳಿಗೆ ಬದಲಿಗೆ ಮೂರು ದಿನದಲ್ಲಿ ಮಾಡಬೇಕು. ಆನಂತರ ಚಟುವಟಿಕೆಯನ್ನು ಏಳು ದಿನಗಳ ಒಳಗೆ ಪೂರ್ಣಗೊಳಿಸಬೇಕು. ಇದರಿಂದ ಇಡೀ ಪ್ರಕ್ರಿಯೆ ವೇಗ ಪಡೆಯಲಿದ್ದು, ಇಡೀ ಪ್ರಕ್ರಿಯೆ 76 ದಿನದಲ್ಲಿ ಮುಗಿಯುತ್ತದೆ ಎಂಬುದನ್ನು ಸರಾಸರಿ 70 ದಿನದಲ್ಲಿ ಪೂರ್ಣಗೊಳಿಸಬೇಕು. ನ್ಯಾಯಾಲಯ ಮಾಡಿರುವ ಬದಲಾವಣೆಗೆ ಬಿಬಿಎಂಪಿ ಪರ ವಕೀಲರು ಅಧಿಕಾರಿಗಳ ಸೂಚನೆಯ ಮೇರೆಗೆ ಒಪ್ಪಿಕೊಂಡಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿದೆ.

ಇದಲ್ಲದೇ, ಕಾರ್ಯಕಾರಿ ಎಂಜಿನಿಯರ್‌ ಅವರ ಕಚೇರಿಯಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿ ಇದ್ದರೆ, ಅವುಗಳನ್ನು ಭರ್ತಿ ಮಾಡುವ ಸಂಬಂಧ ಸರ್ಕಾರವು ಸೂಕ್ತ ವಿಧಿವಿಧಾನಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಆಗಸ್ಟ್‌ 1ರಂದು ನ್ಯಾಯಾಲಯ ಮಾಡಿರುವ ಆದೇಶ ಆಧರಿಸಿ ಸಂಬಂಧಿತ ಎಲ್ಲರ ಜೊತೆ ಸಮನ್ವಯ ಸಾಧಿಸಿ ಕ್ರಿಯಾಯೋಜನೆ ರೂಪಿಸಲಾಗಿದೆ. ರಾಜಕಾಲುವೆಗಳು ಮತ್ತು ಕೆರೆಗಳ ಒತ್ತುವರಿ ನಿಷೇಧಿಸಲು ಮತ್ತು ತೆರವು ಮಾಡುವುದಕ್ಕೆ ಸಂಬಂಧಿಸಿದ ವರದಿ, ಕಾರ್ಯಗತಗೊಳಿಸಲು ಮತ್ತು ಭೂಕಬಳಿಕೆ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.

ವಿಭಾಗದ ಕಾರ್ಯಕಾರಿ ಎಂಜಿನಿಯರ್‌ ಅವರು ದೂರು ಪ್ರಾಧಿಕಾರವಾಗಲಿದ್ದು, ತಹಶೀಲ್ದಾರ್‌ ಅವರು ದೂರು ಸ್ವೀಕಾರ, ತನಿಖೆ ಮತ್ತು ಅಗತ್ಯ ಆದೇಶ ಮಾಡುವ ಪ್ರಾಧಿಕಾರವಾಗಿ ಕೆಲಸ ಮಾಡಲಿದ್ದಾರೆ. ತಹಶೀಲ್ದಾರ್‌ ಆದೇಶಿಸಿದ ಬಳಿಕ ವಲಯ ಕಾರ್ಯಕಾರಿ ಎಂಜಿನಿಯರ್‌ ಅವರು ಒತ್ತುವರಿ ತೆರವು ಪ್ರಾಧಿಕಾರವಾಗಿ ಕೆಲಸ ಮಾಡಲಿದ್ದಾರೆ. ಭೂಒತ್ತುವರಿ ಕಬಳಿಕೆ ನಿಷೇಧ ನ್ಯಾಯಾಲಯದ ಮುಂದೆ ದೂರು ದಾಖಲಿಸುವ ಹೊಣೆಯು ತಹಶೀಲ್ದಾರ್‌ ಅವರ ಮೇಲಿರಲಿದೆ ಎಂದು ನ್ಯಾಯಾಲಯ ಹೇಳಿದೆ.

859.79 ಕಿ ಮೀ ರಾಜಕಾಲುವೆಯಲ್ಲಿ 655 ತೊರೆಗಳು ಹರಿಯುತ್ತವೆ. ಇವೆಲ್ಲವೂ ಕರ್ನಾಟಕ ಭೂ ಕಂದಾಯ ಕಾಯಿದೆ ಅಡಿ ಸರ್ಕಾರದ ಆಸ್ತಿಗಳಾಗಿವೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com