ಕಾವೇರಿ ವಿವಾದ: 'ಸುಪ್ರೀಂ' ಆದೇಶಕ್ಕೆ ವಿರೋಧ; ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಕನ್ನಡಪರ ಹೋರಾಟಗಾರರ ಬಂಧನ

ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ವಿಧಾನಸೌಧ ಮುತ್ತಿಗೆ ಯತ್ನಿಸಿದ ಕನ್ನಡಪರ ಹೋರಾಟಗಾರರು
ವಿಧಾನಸೌಧ ಮುತ್ತಿಗೆ ಯತ್ನಿಸಿದ ಕನ್ನಡಪರ ಹೋರಾಟಗಾರರು

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ಅವರನ್ನು ಬಂಧಿಸುವ ಮೂಲಕ ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಏತನ್ಮಧ್ಯೆ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಅನುಸರಿಸದಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಮಿಳುನಾಡಿಗೆ ನೀರು ಬಿಡುವಂತೆ ರಾಜ್ಯಕ್ಕೆ ಸುಪ್ರೀಂ ಆದೇಶ ನೀಡಿದ ಬಳಿಕ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಜಮಾಯಿಸಿದ ನೂರಕ್ಕೂ ಹೆಚ್ಚು ಕನ್ನಡಪರ ಸಂಘಟನೆಯ ಸದಸ್ಯರು ವಿಧಾನಸೌಧದತ್ತ ಪಾದಯಾತ್ರೆ ಆರಂಭಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಅವರನ್ನು ಬಿಎಂಟಿಸಿ ಬಸ್‌ಗಳಲ್ಲಿ ಬಂಧಿಸಿ ವಶಕ್ಕೆ ತೆಗೆದುಕೊಂಡರು.

ಇದೇ ವೇಳೆ ಕ.ರ.ವೇ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ರಾಜ್ಯ ಸರ್ಕಾರ ಗಟ್ಟಿ ನಿಲುವು ತಳೆಯಬೇಕು, ನೆರೆ ರಾಜ್ಯಕ್ಕೆ ನೀರು ಬಿಡಬಾರದು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೃಢ ನಿರ್ಧಾರ ಕೈಗೊಳ್ಳಬೇಕು, ಸರ್ಕಾರ ತೆರವಾದರೂ ರೈತರು ಸಂಕಷ್ಟದ ಸಮಯದಲ್ಲಿ ರಾಜ್ಯದ ರೈತರೊಂದಿಗೆ ನಿಲ್ಲಬೇಕು’ ಎಂದು ಆಗ್ರಹಿಸಿದರು.

ಬಂದ್ ಗೆ ಕರೆ ನೀಡಲು ನಿರ್ಧಾರ
ಅಂತೆಯೇ ನಾಳೆಯಿಂದ ರಾಜ್ಯಾದ್ಯಂತ ಕ.ರ.ವೇ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ತಿಳಿಸಿದ ನಾರಾಯಣ ಗೌಡರು, ಸಚಿವರು, ಶಾಸಕರು, ಸಂಸದರು ಹೋದಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಅಲ್ಲದೆ, ಕರ್ನಾಟಕ ಬಂದ್‌ಗೆ ಕರೆ ನೀಡಲು ಕನ್ನಡ ಪರ ಸಂಘಟನೆಗಳ ಒಕ್ಕೂಟ ಚಿಂತನೆ ನಡೆಸಿದ್ದು, ಶುಕ್ರವಾರ ಈ ಸಂಬಂಧ ಸಭೆ ಕರೆಯಲಿದೆ ಎಂದು ತಿಳಿದುಬಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com