ರಾಜ್ಯದಲ್ಲಿ ಕೊರೋನಾ ಹೆಚ್ಚಳ: 1 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮತ್ತೆ ಹೆಚ್ಚಾಗತೊಡಗಿದ್ದು, ಸುಮಾರು 12 ವಾರಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ 1,000ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮತ್ತೆ ಹೆಚ್ಚಾಗತೊಡಗಿದ್ದು, ಸುಮಾರು 12 ವಾರಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ 1,000ಕ್ಕೆ ಏರಿಕೆಯಾಗಿದೆ.

ಜನವರಿ ತಿಂಗಳಿನಿಂದಲೂ ರಾಜ್ಯದಲ್ಲಿ ಕೋವಿಡ್ ಸೋಂಕು, H3N2, H1N1 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬರುತ್ತಲೇ ಇದ್ದು, ಈ ಬೆಳವಣಿಗೆ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಆತಂಕಕ್ಕೊಳಗಾಗಿರುವ ಜನತೆ ಆರೋಗ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ಏರುಪೇರುಗಳು ಕಂಡು ಬಂದರೂ ವೈದ್ಯರನ್ನು ಭೇಟಿಯಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಸೋಂಕು, ರೋಗಲಕ್ಷಣ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಇದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಬಹುದಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ವೈದ್ಯರಾದ ಡಾ.ಸಿಲ್ವಿಯಾ ಕರ್ಪಗಂ ಮಾತನಾಡಿ, ಸೋಂಕಿನ ಪ್ರಮಾಣ ಈಗಾಗಲೇ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆರಂಭದಲ್ಲಿಯೇ ಜಾಗೃತಿ ಮೂಡಿಸಲುವ ಕೆಲಸ ಮಾಡಲಾಗುತ್ತಿದೆ. ಸೋಂಕು ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಸಾಮಾನ್ಯವಾಗಿಯೇ ಸರ್ಕಾರ ಚುರುಕುಗೊಳ್ಳುತ್ತದೆ. ಈ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.

ತಲೆನೋವು, ಜಠರಗರುಳಿನ ಸಮಸ್ಯೆಗಳು ಅಥವಾ ಸ್ವಲ್ಪ ಜ್ವರದಂತಹ ಸಣ್ಣಪುಟ್ಟ ಸಮಸ್ಯೆಗಳಿಗೂ ಜನರು ವೈದ್ಯರ ಬಳಿಗೆ ಬರುತ್ತಿದ್ದಾರೆ. ಈ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಡಿ ರಂದೀಪ್ ಮಾತನಾಡಿ, XBB 1.16 ರೂಪಾಂತರವು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದೆ. ಇದರೊಂದಿಗೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳಗಳು ಕಂಡು ಬಂದಿದೆ. ಆದರೆ ವೆಂಟಿಲೇಟರ್ ಹಾಸಿಗೆಗಳ ಅಗತ್ಯವಿರುವ ಗಂಭೀರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಗಳಾಗಿಲ್ಲ. ಸೋಂಕು ಹೆಚ್ಚಳವಾಗುತ್ತಿರುವ ಬಗ್ಗೆ ಇಲಾಖೆಯು ಗಮನಹರಿಸುತ್ತಿದ್ದು, ಚುನಾವಣೆ ವೇಳೆ ಸೋಂಕು ಹೆಚ್ಚಾಗದಂತೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಮಾಸ್ಕ್ ಗಳನ್ನು ಕಡ್ಡಾಯಗೊಳಿಸುವ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ. ಆದರೆ, ಕೋವಿಡ್ ಸೂಕ್ತ ನಿಯಮಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಸೋಂಕು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com