ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಆದಾಯ ಸಂಗ್ರಹ ಮೇಲೆ ಚುನಾವಣೆ ಪರಿಣಾಮ?

ರಾಜ್ಯ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದ್ದು, ಇದರ ಪರಿಣಾಮ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಆದಾಯ ಸಂಗ್ರಹ ಮೇಲೆ ಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದ್ದು, ಇದರ ಪರಿಣಾಮ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಆದಾಯ ಸಂಗ್ರಹ ಮೇಲೆ ಬಿದ್ದಿದೆ.

ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿನ ಆದಾಯ ಸಂಗ್ರಹದ ಕಾರ್ಯವಿಧಾನಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕಳೆದ ಕೆಲವು ದಿನಗಳಿಂದ ತಮ್ಮ ಎಲ್ಲಾ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ಆದಾಯ ಸಂಗ್ರಹ ಕುರಿತ ನಮ್ಮ ಗುರಿಯಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮಾರ್ಚ್ 29 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತು. ಆದರೆ, ಇದಕ್ಕೂ ಮುನ್ನವೇ ಕೆಲ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿದೆ. ಇದೀಗ ಮತ್ತಷ್ಟು ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗುತ್ತಿದೆ. ಬಿಬಿಎಂಪಿ ಕಂದಾಯ ವಿಭಾಗವೊಂದರಿಂದಲೇ 800 ಖಾತೆ ಹಾಗೂ ಇತರೆ ವಿಭಾಗಗಳ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಇದು ಇಲಾಖೆಯ ಆದಾಯ ಸಂಗ್ರಹಣೆ ಮತ್ತು ಗುರಿಗಳಿಗೆ ಅಡ್ಡಿಯುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಪಾಲಿಕೆಯು 2022 ರಲ್ಲಿ 3,758 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಭೂ ಕಂದಾಯ ಕಾಯಿದೆ ಮತ್ತು ದೇಶ ಮತ್ತು ನಗರ ಯೋಜನಾ ಕಾಯ್ದೆಯ ಪ್ರಕಾರ ಬಿ-ಖಾತಾ ಸೈಟ್‌ಗಳನ್ನು ಎ-ಖಾತಾ ಆಗಿ ಪರಿವರ್ತಿಸುವ ಮೂಲಕ ಹೆಚ್ಚುವರಿ 800 ಕೋಟಿ ರೂಪಾಯಿ ಸಂಗ್ರಹ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಆದರೀಗ ಸಂಪೂರ್ಣ ಆದಾಯ ಸಂಗ್ರಹ ಮಾಡುವ ತಂಡವು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರವೇ ಸೂಕ್ತ ರೀತಿಯ ಆದಾಯ ಸಂಗ್ರಹಣೆ ಕಾರ್ಯ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಬಿಡಬ್ಲ್ಯುಎಸ್ ಎಸ್ ಬಿ ಇಂಜಿನಿಯರ್ ಇನ್ ಚೀಫ್ ಸುರೇಶ್ ಮಾತನಾಡಿ, ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳು, ಸಹಾಯಕ ಎಂಜಿನಿಯರ್ ಗಳು ಹಾಗೂ ಜೂನಿಯರ್ ಎಂಜಿನಿಯರ್ ಗಳನ್ನು ಒಳಗೊಂಡ 600 ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ 200 ಮೀಟರ್ ರೀಡರ್‌ಗಳನ್ನು ಕೂಡ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಾಗುವುದು. ಇದರಿಂದಾಗಿ ಅಧಿಕಾರಿಗಳಿಗೆ ಸ್ವಲ್ಪ ಮಟ್ಟಿಗೆ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಚುನಾವಣೆ ಮುಗಿದ ನಂತರ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com