ಮಹಿಳೆಯರಿಗೆ ಸಿಗದ ಉಚಿತ ಬಸ್ ಪಾಸ್: ಘೋಷಣೆಗೆ ಸೀಮಿತವಾಯ್ತೇ ಸರ್ಕಾರದ ಭರವಸೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಉಚಿತ ಬಸ್ ಪಾಸ್ ನಿರೀಕ್ಷೆಯಲ್ಲಿದ್ದ ರಾಜ್ಯದ 30 ಲಕ್ಷ ದುಡಿಯುವ ಮಹಿಳೆಯರು ಭಾರೀ ನಿರಾಸೆಗೊಳಗಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಉಚಿತ ಬಸ್ ಪಾಸ್ ನಿರೀಕ್ಷೆಯಲ್ಲಿದ್ದ ರಾಜ್ಯದ 30 ಲಕ್ಷ ದುಡಿಯುವ ಮಹಿಳೆಯರು ಭಾರೀ ನಿರಾಸೆಗೊಳಗಾಗಿದ್ದಾರೆ.

ಕಳೆದ ಫೆಬ್ರವರಿ 17ರಂದು 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಹಿಳೆಯರ ಸಬಲೀಕರಣಕ್ಕೆ ಗೃಹಿಣಿ ಶಕ್ತಿ ‌ಯೋಜನೆ ರೂಪಿಸಿ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದರು.

ಮುಖ್ಯಮಂತ್ರಿಗಳ ಘೋಷಣೆಯಂತೆ ಏಪ್ರಿಲ್ 1 ರಿಂದ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಗಳನ್ನು ನೀಡಬೇಕಾಗಿತ್ತು. ಆದರೆ, ಕೊಟ್ಟ ಮಾತಿನಂತೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗಿಲ್ಲ.  ಈ ಉಚಿತ ಬಸ್ ಪಾಸ್‌ಗೆ ರಾಜ್ಯ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂಪಾಯಿ ಮೀಸಲಿರಿಸಲಾಗಿತ್ತು.

“ಪ್ರತಿದಿನ, ನಾನು ಚಾಮರಾಜಪೇಟೆಯಿಂದ ಕೋರಮಂಗಲದಲ್ಲಿರುವ ನನ್ನ ಕಚೇರಿಗೆ ಪ್ರಯಾಣಿಸುತ್ತೇನೆ. ಉಚಿತ ಬಸ್ ಪಾಸ್ ಘೋಷಿಸಿದಾಗ, ಬಹಳಷ್ಟು ಸಂತಸವಾಗಿತ್ತು. ಏಕೆಂದರೆ, ದುಡಿಯುವ ದೊಡ್ಡ ಭಾಗದ ಮೊತ್ತ ಸಾರಿಗೆ ಖರ್ಚಿಗೇ ಹೋಗುತ್ತಿತ್ತು. ಉಚಿತ ಬಸ್ ಪಾಸ್ ನಿಂದ ನಮ್ಮಂತಹ ಹೆಣ್ಣುಮಕ್ಕಳಿಗೆ ಸಾಕಷ್ಟು ಸಹಾಯವಾಗುತ್ತಿತ್ತು. ಆದರೆ, ಪಾಸ್ ಗಳನ್ನು ಇನ್ನೂ ನೀಡಲಾಗುತ್ತಿಲ್ಲ. ಪಾಸ್'ಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು, ಕಾರ್ಯವಿಧಾನಗಳ ಬಗ್ಗೆ ಇನ್ನು ಸರ್ಕಾರ ಸ್ಪಷ್ಟತೆಗಳನ್ನು ನೀಡಿಲ್ಲ ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಹೇಳಿದ್ದಾರೆ.

ಈ ಹಿಂದೆ, ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನದಂದು ಬಿಎಂಟಿಸಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡಿದಾಗ, ಅದಕ್ಕೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಬಿಎಂಟಿಸಿ ಅಂಕಿಅಂಶಗಳ ಪ್ರಕಾರ, ಮಹಿಳಾ ದಿನಾಚರಣೆ ದಿನದಂದು 21.97 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಕೊಡುಗೆಯನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಯೋಜನೆಯ ಸ್ಥಿತಿಗತಿ ಕುರಿತ ಪ್ರಶ್ನೆಗಳಿಗೆ ಬಿಎಂಟಿಸಿ ಎಂಡಿ ಸತ್ಯವತಿ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಬಿಎಂಟಿಸಿಯ ಅಧಿಕಾರಿಯೊಬ್ಬರು ಚುನಾವಣೆ ಮುಗಿದ ನಂತರವೇ ಪಾಸ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com