ರಾಜ್ಯಕ್ಕಿಂದು ಪ್ರಧಾನಿ ಮೋದಿ: ಇಂದು, ನಾಳೆ ಅಬ್ಬರದ ಪ್ರಚಾರ, ಬೆಂಗಳೂರು ಸೇರಿ 8 ಕಡೆ ಮತಯಾಚನೆ

ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ 12 ದಿನ ಮಾತ್ರ ಉಳಿದ್ದು, ಈ ನಡುವಲ್ಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಎಎಪಿ ಸೇರಿದಂತೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು...
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ 12 ದಿನ ಮಾತ್ರ ಉಳಿದ್ದು, ಈ ನಡುವಲ್ಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಎಎಪಿ ಸೇರಿದಂತೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಶನಿವಾರ ಮತ್ತು ಭಾನುವಾರ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಎರಡು ದಿನಗಳಲ್ಲಿ ಪ್ರಧಾನಿ ಮೋದಿ ಅವರು, ಆರು ಸಾರ್ವಜನಿಕ ಸಭೆ ಹಾಗೂ ಎರಡು ಕಡೆ ರೋಡ್ ಶೋಗಳ ಮೂಲಕ ಪ್ರಚಾರ ಮಾಡಲಿದ್ದಾರೆ.

ಇಂದು ಬೆಳಗ್ಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು ಮೊದಲು ಬೀದರ್ ಗೆ ಆಗಮಿಸಲಿದ್ದು, ಅಲ್ಲಿಂದ ಹುಮ್ನಾಬಾದ್ ಗೆ ಹೆಲಿಕಾಪ್ಟರ್ ಮೂಲಕ ಬಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನಂತರ ವಿಜಯಪುರದಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಎರಡನೇ ಸಾರ್ವಜನಿಕ ಸಮಾವೇಶಕ್ಕೂ ಹಾಜರಾಗಲಿದ್ದಾರೆ. ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಮಧ್ಯಾಹ್ನ 2:45 ಕ್ಕೆ ನಡೆಯಲಿರುವ ಮೂರನೇ ಸಮಾವೇಶದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬೀದರ್, ವಿಜಯಪುರ ಹಾಗೂ ಬೆಳಗಾವಿ ಕಾರ್ಯಕ್ರಮಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ.

ಇದಾದ ಬಳಿಕ ಬೆಂಗಳೂರಿನಲ್ಲೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ನಂತರ ನಾಳೆ (ಏ.30, ಭಾನುವಾರ) ಬೆಳಿಗ್ಗೆ 11:30ಕ್ಕೆ ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನದಿಂದ ಹೊರಟು ನಗರ ಸಮೀಪದ ಕೋಲಾರದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನಂತರ ಚನ್ನಪಟ್ಟಣ ಹಾಗೂ ಬೇಲೂರಿಗೆ ಬರಲಿದ್ದಾರೆ. ರಾಮನಗರ ಸಮೀಪದ ಚನ್ನಪಟ್ಟಣದಲ್ಲಿ ಮಧ್ಯಾಹ್ನ 1:30 ಕ್ಕೆ ಐದನೇ ಸಾರ್ವಜನಿಕ ಸಭೆ ಹಾಗೂ 3:45 ಕ್ಕೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಅಂತಿಮ ಸಭೆಯನ್ನು ನಿಗದಿಪಡಿಸಲಾಗಿದೆ.

ಪ್ರಧಾನಿ ಅವರ ಎರಡನೇ ರೋಡ್ ಶೋ ಭಾನುವಾರ ಸಂಜೆ ಮೈಸೂರಿನಲ್ಲಿ ನಡೆಯಲಿದ್ದು, ನಂತರ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಅವರು ಇತ್ತೀಚೆಗೆ ಏಳು ನಗರಗಳ ಮೂಲಕ 5,300 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿ, 72ನೇ ವಯಸ್ಸಿನಲ್ಲೂ 36 ಗಂಟೆಗಳಲ್ಲಿ ಎಂಟು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದಾರೆ.

ಫೆಬ್ರವರಿಯೊಂದರಿಂದಲೇ ಕರ್ನಾಟಕಕ್ಕೆ ಒಂಬತ್ತು ಬಾರಿ ಭೇಟಿ ನೀಡಿದ್ದಾರೆ. ಬಿಜೆಪಿ ನಾಯಕರ ಅಷ್ಟೇ ಅಲ್ಲದೆ, ಕಾಂಗ್ರೆಸ್‌ನವರೂ ಕೂಡ ತಮ್ಮ ದೆಹಲಿ ನಾಯಕರನ್ನು ಕರೆಸಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com