ಬೆಂಗಳೂರು: ಬುಲೆಟ್ ಬೈಕ್ ಕದಿಯುತ್ತಿದ್ದ ಬಿಟೆಕ್ ಪದವೀಧರರ ಬಂಧನ
ಮೋಜು ಮಾಡಲು ಮನೆಗಳ ಎದುರು ನಿಲ್ಲಿಸುತ್ತಿದ್ದ ರಾಯಲ್ ಎನ್'ಫೀಲ್ಡ್ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಬಿಟೆಕ್ ಪದವೀಧರರನ್ನು ಹನುಮಂತನಗರ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
Published: 06th August 2023 10:51 AM | Last Updated: 06th August 2023 10:51 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮೋಜು ಮಾಡಲು ಮನೆಗಳ ಎದುರು ನಿಲ್ಲಿಸುತ್ತಿದ್ದ ರಾಯಲ್ ಎನ್'ಫೀಲ್ಡ್ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಬಿಟೆಕ್ ಪದವೀಧರರನ್ನು ಹನುಮಂತನಗರ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಮೂಲದ ಹೇಮಾದ್ರಿ (23) ಹಾಗೂ ಪವನ್ (23) ಬಂಧಿತತರು. ಆರೋಪಿಗಳಿಂದ ರೂ.3 ಲಕ್ಷ ಮೌಲ್ಯದ ಎರಡು ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಹನುಮಂತನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮನೆ ಎದುರು ನಿಲುಗಡೆ ಮಾಡಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಇಬ್ಬರೂ ಆರೋಪಿಗಳು ಆಂಧ್ರಪ್ರದೇಶದಲ್ಲಿ ಬಿಟೆಕ್ ಪದವಿ ಪಡೆದಿದ್ದು, ಉದ್ಯೋಗ ಇಲ್ಲದೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿ ಹೇಮಾದ್ರಿ ಇತ್ತೀಚೆಗೆ ನಗರಕ್ಕೆ ಬಂದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಖಾಸಗಿ ಏಜೆನ್ಸಿ ಯೊಂದರಲ್ಲಿ ತರಬೇತಿ ಪಡೆಯುತ್ತಿದ್ದ. ಈ ಬಗ್ಗೆ ತನ್ನ ಸಹಪಾಠಿ ಪವನ್ ಗೂ ವಿಚಾರ ತಿಳಿಸಿ ನಗರಕ್ಕೆ ಕರೆಸಿಕೊಂಡಿದ್ದ. ಇಬ್ಬರೂ ಉದ್ಯೋಗಕ್ಕಾಗಿ ಕೆಲ ದಿನ ನಗರದಲ್ಲಿ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಊರಿಗೆ ವಾಪಸ್ಸಾಗಲು ನಿರ್ಧರಿಸಿದ್ದರು.
ಇದಕ್ಕೂ ಮುನ್ನ ನಗರದಲ್ಲಿ ರಾಯಲ್ ಎನ್ ಫೀಲ್ಡ್ ಕಳ್ಳತನ ಮಾಡಿಕೊಂಡು ತೆರಳಲು ಸಂಚು ರೂಪಿಸಿದ್ದರು. ಅದರಂತೆ ಹನುಮಂತನಗರ ಹಾಗೂ ಕಂಪೇಗೌಡ ನಗರದಲ್ಲಿ ಮನೆಗಳ ಎದುರು ನಿಲ್ಲಿಸಿದ್ದ ಎರಡು ಬೈಕ್ ಗಳನ್ನು ಕದ್ದು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದರು. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ಹಾಗೂ ಮೊಬೈಲ್ ಕರೆಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಆಂಧ್ರಪ್ರದೇಶದ ನೆಲ್ಲೂರು ಬಳಿ ಪತ್ತೆ ಹಚ್ಚಿ, ಬಂಧನಕ್ಕೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು, ಬೈಕ್ ಗಳ ಬಗ್ಗೆ ಕುತೂಹಲ ಇದ್ದ ಕಾರಣ ಕಳ್ಳತನ ಮಾಡಿದ್ದೆವು ಎಂದು ಹೇಳಿಕೊಂಡಿದ್ದಾರೆ. ಇದೀಗ ಇಬ್ಬರೂ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತನಿಖೆಯ ಭಾಗವಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.