ರಾಜ್ಯಾದ್ಯಂತ ಡೆಂಗ್ಯೂ ಜ್ವರ ಉಲ್ಬಣ: ಈವರೆಗೂ 5,526 ಪ್ರಕರಣ ಪತ್ತೆ!

ಮಧ್ಯಂತರ ಮಳೆ ಮತ್ತು ತಾಪಮಾನದ ಕುಸಿತವು ನಗರದಲ್ಲಿ ಆರೋಗ್ಯದ ಕಾಳಜಿಗೆ ಕಾರಣವಾಗುತ್ತಿದೆ. ರಾಜ್ಯದಾದ್ಯಂತ ಸಾಂಕ್ರಾಮಿಕ ರೋಗಗಳು, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮಧ್ಯಂತರ ಮಳೆ ಮತ್ತು ತಾಪಮಾನದ ಕುಸಿತವು ನಗರದಲ್ಲಿ ಆರೋಗ್ಯದ ಕಾಳಜಿಗೆ ಕಾರಣವಾಗುತ್ತಿದೆ. ರಾಜ್ಯದಾದ್ಯಂತ ಸಾಂಕ್ರಾಮಿಕ ರೋಗಗಳು, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

2022ಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಶೇ.22ರಷ್ಟು ಏರಿಕೆಗಳು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಎನ್‌ವಿಬಿಡಿಸಿಪಿ ಉಪನಿರ್ದೇಶಕ ಡಾ.ಮಹಮೂದ್ ಷರೀಫ್ ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆಗಳು ಕಂಡು ಬಂದಿದೆ. ಪೂರ್ವ, ದಕ್ಷಿಣ, ಮಹದೇವಪುರ ವಲಯಗಳಲ್ಲಿ ಒಟ್ಟಾರೆ ಶೇ.60ರಷ್ಟು (2,969) ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಜನವರಿಯಿಂದ ಆಗಸ್ಟ್ ವರೆಗೆ 4,507 ಡೆಂಗ್ಯು ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ವರ್ಷ ಆಗಸ್ಟ್ 11 ರವರೆಗೆ, 5,526 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಶೇ.22ರಷ್ಟು ಹೆಚ್ಚಳಗಳಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಜೊತೆಗೆ ಮೈಸೂರು (353), ವಿಜಯಪುರ (146), ಶಿವಮೊಗ್ಗ (155), ದಕ್ಷಿಣ ಕನ್ನಡ (110), ಉಡುಪಿ (126) ಮತ್ತು ಬೆಳಗಾವಿ (135)ಯಲ್ಲಿಯೂ ಹೆಚ್ಚಿನ ಸಂಖ್ಯೆಯ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.

ಈಡಿಸ್ ಸೊಳ್ಳೆಗಳು ಡೆಂಗ್ಯೂವಿಗೆ ಕಾರಣವಾಗುತ್ತಿದ್ದು, ಸೊಳ್ಳೆಯು ಜಿಕಾ, ಚಿಕೂನ್‌ಗುನ್ಯಾ ಮತ್ತು ಇತರ ವೈರಸ್‌ಗಳನ್ನು ಸಹ ಹರಡುತ್ತಿವೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಜಾಗತಿಕವಾಗಿ ಪ್ರತಿ ವರ್ಷ ಸುಮಾರು 400 ಮಿಲಿಯನ್ ಜನರು ಡೆಂಗ್ಯೂ ಸೋಂಕಿಗೆ ಒಳಗಾಗುತ್ತಾರೆ ಎಂದು ಹೇಳಿದೆ. ಕಳೆದ ವರ್ಷ ನಾಲ್ವರು ಡೆಂಗ್ಯೂವಿಗೆ ಬಲಿಯಾಗಿದ್ದರು. ಆದರೆ, ಈ ವರ್ಷ ಯಾವುದೇ ಸಾವುಗಳು ವರದಿಯಾಗಿಲ್ಲ.

ಸಾಂಕ್ರಾಮಿಕ ರೋಗ ಕೋವಿಡ್ ಪರಿಣಾಮ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವಂತೆ ಮಾಡಿತ್ತು. ಹೀಗಾಗಿ ಮಕ್ಕಳನ್ನು ಡೆಂಗ್ಯೂ ಹೆಚ್ಚು ಬಾಧಿಸುತ್ತಿದೆ.

ಡೆಂಗ್ಯೂ ಜೊತೆಗೆ ವೈರಲ್ ಫೀವರ್, ಟೈಫಾಯಿಡ್, ತೀವ್ರವಾದ ಅತಿಸಾರ ರೋಗ ಮತ್ತು ನ್ಯುಮೋನಿಯಾ ಪ್ರಕರಣಗಳಲ್ಲೂ ಕೂಡ ಏರಿಕೆಗಳು ಕಂಡುಬಂದಿವೆ.

ಡೆಂಗ್ಯೂವಿನಿಂದ ದೂರ ಉಳಿಯಲು ಮನೆಗಳ ಒಳಗೆ ಮತ್ತು ಸುತ್ತಮುತ್ತ ಸಂಗ್ರಹವಾಗಿರುವ ನೀರನ್ನು ಹೊರಹಾಕಬೇಕು. ಸೋಂಕನ್ನು ತಪ್ಪಿಸಲು ಸೊಳ್ಳೆ ನಿವಾರಕಗಳು, ಸೊಳ್ಳೆ ಪರದೆಗಳನ್ನು ಬಳಸಬೇಕು ಮತ್ತು ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸಬೇಕು. ಜ್ವರ, ಮೂಗು ಸೋರುವುದು, ತಲೆನೋವು ಅಥವಾ ದೇಹದ ನೋವು ಮುಂತಾದ ಲಕ್ಷಣಗಳು ಕಂಡುಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಈ ನಡುವೆ ಪ್ರಕರಣಗಳ ತೀವ್ರತೆಯನ್ನು ಅಧ್ಯಯನ ಮಾಡಲು ಮತ್ತು ಹೊಸ ವೈರಸ್‌ಗಳನ್ನು ಗುರುತಿಸಲು ಶಾಲೆಗಳು, ದೇವಸ್ಥಾನಗಳು, ಮನೆಗಳು ಮತ್ತು ಹೆಚ್ಚಿನ ರೋಗಿಗಳ ಭೇಟಿಯಿರುವ ಆಸ್ಪತ್ರೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ)ರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com