ಬೆಂಗಳೂರು: ಆಟೋ ಚಾಲಕರ ಅನುಕೂಲಕ್ಕಾಗಿ ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ನಮ್ಮ ಯಾತ್ರಿ ಆ್ಯಪ್ ನ್ನು ಬಳಕೆಗೆ ತಂದಿತ್ತು. ಆದರೆ, ಇದೀಗ ಇತರೆ ಆ್ಯಪ್ ಗಳಂತೆ ಈ ಆ್ಯಪ್ ಬಳಕೆದಾರರು ಒಕ್ಕೂಟಕ್ಕೆ ದಿನಕ್ಕೆ ರೂ.25 ಶುಲ್ಕ ಪಾವತಿಸುವಂತೆ ನಿಯಮ ಹೇರಲಾಗುತ್ತಿದ್ದು. ಈ ನಿರ್ಧಾರಕ್ಕೆ ಆಟೋ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಮ್ಮ ಯಾತ್ರಿ ಆ್ಯಪ್ 2022 ರ ನವೆಂಬರ್ ತಿಂಗಳಲ್ಲಿ ಬಳಕೆಗೆ ತರಲಾಗಿದ್ದು, 2023ರ ಸೆಪ್ಟೆಂಬರ್ 1 ರಿಂದ ಆಟೋ ಚಾಲಕರು ದಿನಕ್ಕೆ 25 ರೂಪಾಯಿಯನ್ನು ಒಕ್ಕೂಟಕ್ಕೆ ನೀಡಬೇಕು ಎಂಬ ನಿಯಮವನ್ನು ಜಾರಿ ಮಾಡಿದ್ದಾರೆ.
ಈ ನಿರ್ಧಾರಕ್ಕೆ ನಗರದ ಆಟೋ ಚಾಲಕರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆರಂಭದಲ್ಲಿ ಆ್ಯಪ್ ಆಟೋ ಚಾಲಕರ ಸ್ನೇಹಿಯಾಗಿದೆ ಎಂದು ಹೇಳಲಾಗಿತ್ತು. ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದೂ ಭರನಸೆ ನೀಡಲಾಗಿತ್ತು. ಆದರೆ, ಇದೀಗ ಶುಲ್ಕ ನೀಡುವಂತೆ ನಿಯಮ ಹೇರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸ ನಿಯಮದ ಪ್ರಕಾರ ಆ್ಯಪ್ ಬಳಕೆ ಮಾಡುತ್ತಿರುವ ಚಾಲಕರಿಂದ ಪ್ರತಿನಿತ್ಯ ಅನಿಯಮಿತ ರೈಡ್ ಗಳಿಗೆ ರೂ.25ನ್ನು ಶುಲ್ಕವಾಗಿ ಸ್ವೀಕರಿಸಲಿದೆ ಎಂದು ತಿಳಿದುಬಂದಿದೆ.
ಆಟೋರಿಕ್ಷಾ ಚಾಲಕರ ಸಂಘ ನವೆಂಬರ್ 2022 ರಲ್ಲಿ ನಮ್ಮ ಯಾತ್ರಿ ಎಂಬ ಆ್ಯಪ್ನ್ನು ತಯಾರಿಸಿತ್ತು. ಪ್ರಯಾಣಿಕರು ಈ ಆ್ಯಪ್ ಮೂಲಕ ಆಟೋ ಬುಕ್ ಮಾಡಿ ಸೇವೆ ಪಡೆಯಬಹುದಾಗಿದೆ. ನವೆಂಬರ್ನಿಂದ ಇಲ್ಲಿಯವರಗೆ ಆ್ಯಪ್ ಮೂಲಕ ರಿಕ್ಷಾ ಚಾಕಲರು ಸುಮಾರು 5.6 ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾರೆ. ಆ್ಯಪ್ನಿಂದ ದೊರೆತ ಮಾಹಿತಿ ಪ್ರಕಾರ, 89,000 ರಿಕ್ಷಾ ಚಾಲಕರು ಮತ್ತು 17 ಲಕ್ಷ| ಬಳಕೆದಾರರು ಆ್ಯಪ್ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಆ್ಯಪ್ ನಿಂದ ಕಳೆದ 9 ತಿಂಗಳುಗಳಲ್ಲಿ ಚಾಲಕರು 79 ಲಕ್ಷ ಟ್ರೀಪ್ಗಳನ್ನು ಪೂರ್ಣಗೊಳಿಸಿದ್ದಾರೆಂದು ತಿಳಿದುಬಂದಿದೆ.
ಚಂದಾದಾರ ಯೋಜನೆ ಒಂದೇ ರೀತಿಯಲ್ಲಿಯೇ ಇದ್ದರೆ, ಪರವಾಗಿಲ್ಲ. ಆದರೆ, ಕಾಲಾನಂತರ ಶುಲ್ಕ ಹೆಚ್ಚಳ ಮಾಡಲು ಮುಂದಾದರ ಕಷ್ಟವಾಗುತ್ತದೆ ಎಂದು ಆಟೋ ಚಾಲಕರು ಹೇಳಿದ್ದಾರೆ.
ಇಂದಿರಾನಗರ ಮೆಟ್ರೋ ನಿಲ್ದಾಣದ ಹೊರಗೆ ಆಟೋ ಚಾಲನೆ ಮಾಡುವ ನಾರಾಯಣಸ್ವಾಮಿ ಎಂಬುವವರು ಮಾತನಾಡಿ, ಓಲಾ ಮತ್ತು ಉಬರ್‌ಗಿಂತ ಇದು ಉತ್ತಮವಾಗಿದೆ. ಆ ಆ್ಯಪ್ ಗಳು ಹೆಚ್ಚಿನ ಕಮಿಷನ್ ಗಳನ್ನು ಪಡೆಯುತ್ತಿವೆ. ಆದರೆ, ನಮ್ಮ ಯಾತ್ರಿ ಮೊತ್ತವನ್ನು ಹೆಚ್ಚಿಸುತ್ತಿಲ್ಲ. ಇದೀಗ ಶುಲ್ಕ ವಿಧಿಸಿದರೆ, ಓಲಾ, ಉಬರ್ ಗೂ ನಮ್ಮ ಯಾತ್ರಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ ಎಂದು ಹೇಳಿದ್ದಾರೆ.
ಆ್ಯಪ್ ಅಭಿವೃದ್ಧಿ ಪಡಿಸಿದ ಶಾನ್ ಎಂಎಸ್ ಅವರು ಮಾತನಾಡಿ, ಮಾರ್ಕೆಟಿಂಗ್, ಸಾಫ್ಟ್ ವೇರ್ ನಿರ್ವಹಿಸುವುದು ಹಾಗೂ ಇತರೆ ವೆಚ್ಚಗಳಿಗಾಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಶುಲ್ಕ ವಸೂಲಿಯು ಚಾಲಕರಿಗೆ ನಮ್ಮ ಮುಂದುವರಿದ ಸೇವೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಚಾಲಕರಿಗೆ ಭವಿಷ್ಯದ ಇತರೆ ಸೇವೆಗಳನ್ನು ಸುಗಮಗೊಳಿಸುತ್ತದೆ. ಮುಂದಿನ ದಿನಗಳಲ್ಲಿ ಬೆಲೆ ಕಡಿತಗಳನ್ನು ಸಕ್ರಿಯಗೊಳಿಸುವುದರತ್ತ ಪರಿಶೀಲನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
15 ವರ್ಷಗಳಿಂದ ಆಟೋ ಚಾಲನೆ ಮಾಡುತ್ತಿರುವ ಚಾಲಕ ಅರುಣ್ ಕುಮಾರ್ ಎಂಬುವವರು ಮಾತನಾಡಿ, ಆ್ಯಪ್ ಆರಂಭವಾದಾಗ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಇದೀಗ ನಮ್ಮ ಯಾತ್ರಿಯಲ್ಲೂ ಶುಲ್ಕ ವಿಧಿಸಿದರೆ, ನಾವು ಇತರೆ ಆ್ಯಪ್ ಗಳನ್ನೂ ಬಳಕೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಶುಲ್ಕವನ್ನು ನಿಯಂತ್ರಿಸುವ ಸಲುವಾಗಿಯೇ ನಾನು ಗ್ರಾಹಕರಿಗೆ ನಮ್ಮ ಯಾತ್ರಿ ಆ್ಯಪ್ ಬಳಕೆ ಮಾಡುವಂತೆ ಹೇಳುತ್ತಿದ್ದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಲಾಭದ ಪ್ರಮಾಣ ಬಹಳ ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಆ್ಯಪ್ ಗಳಿಗೆ ಏಕೆ ನೀಡಬೇಕು ಎಂದು ಮತ್ತೊಬ್ಬ ಚಾಲಕ ಪ್ರಶ್ನಿಸಿದ್ದಾರೆ.
ಆಟೋ ಯೂನಿಯನ್ ಅಧ್ಯಕ್ಷ ರುದ್ರ ಮೂರ್ತಿ ಮಾತನಾಡಿ, ಈ ಕ್ರಮದಿಂದ ಹೆಚ್ಚಿನವರ ಮೇಲೆ ಪರಿಣಾಮ ಬೀರುವುದಿಲ್ಲ. ಆರಂಭಿಕ ಸಭೆಯಲ್ಲಿ ತಂಡವು ಕೆಲವು ಶುಲ್ಕಗಳನ್ನು ಮಾತ್ರ ವಿಧಿಸುವ ಬಗ್ಗೆ ಮಾಹಿತಿ ನೀಡಿತ್ತು ಎಂದು ಹೇಳಿದ್ದಾರೆ.
ನಮ್ಮ ಯಾತ್ರಿ ಆ್ಯಪ್ ನಿರ್ವಹಿಸುತ್ತಿರುವವರು ಹೇಳಿಕೆ ನೀಡಿ, ಆ್ಯಪ್ ನಿಂದ ಚಾಲಕರು ಹೆಚ್ಚುವರಿ ಶುಲ್ಕ ಪಾವತಿಸದೆ ರೂ.100 ಗಳಿಕೆ ಮಾಡಿದ್ದಾರೆಂದು ಹೇಳಿದೆ.
Advertisement