ಬೆಂಗಳೂರು: ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು
ಬೆಂಗಳೂರು: ನಗರದಲ್ಲಿ ಬುಧವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ 51 ವರ್ಷದ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಹಲಸೂರು ಗೇಟ್ ಮತ್ತು ಬನಶಂಕರಿ ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ.
ಗುರುವಾರ ಬೆಳಗ್ಗೆ ಹಲಸುರುಗೇಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಬ್ಬಯ್ಯ ವೃತ್ತದ ಬಳಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 51 ವರ್ಷದ ಪುಷ್ಪಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಕಬ್ಬನ್ ಪೇಟೆ ನಿವಾಸಿಯಾಗಿರುವ ಮಹಿಳೆ, ಸಮೀಪದ ಬೇಕರಿಗೆ ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಬಸ್ ಚಾಲಕ ನಾಗರಾಜ್ ನನ್ನು ಬಂಧಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ಕಸದ ಲರಿಗೆ ಡಿಕ್ಕಿ ಹೊಡೆದ ಪರಿಣಾಮ ಬನಶಂಕರಿಯ ಯಾರಬ್ ನಗರದ ನಿವಾಸಿ 42 ವರ್ಷದ ಮುದ್ಗರ್ ಎಂಬುವವರು ಸಾವನ್ನಪ್ಪಿದ್ದಾರೆ.
ವೃತ್ತಿಯಲ್ಲಿ ವೆಲ್ಡರ್ ಆಗಿರುವ ಮುದ್ಗರ್ ಬುಧವಾರ ಮಧ್ಯಾಹ್ನ 1.45ರ ಸುಮಾರಿಗೆ ಬೇಂದ್ರೆ ವೃತ್ತದ ಬಳಿ ಯಾರಬ್ ನಗರ ಮುಖ್ಯರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಲಾರಿ ಚಾಲಕ ಅತಿವೇಗವಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದು, ಸ್ಕೂಟರ್'ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಕೆಳಗೆ ಬಿದ್ದ ಮುದ್ಗರ್ ಅವರ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬನಶಂಕರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ