ಆಯುಕ್ತರ ಭರವಸೆ ಬಳಿಕ ಮುಷ್ಕರ ಹಿಂಪಡೆದು 1 ಗಂಟೆ ಹೆಚ್ಚುವರಿ ಕೆಲಸ ಮಾಡಿದ ಬಿಬಿಎಂಪಿ ನೌಕರರು!

ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಭರವಸೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆದ ಬಿಬಿಎಂಪಿ ಸಿಬ್ಬಂದಿಗಳು ನೌಕರರು ಹಾಗೂ ಅಧಿಕಾರಿಗಳು ಗುರುವಾರ 1 ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಭರವಸೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆದ ಬಿಬಿಎಂಪಿ ಸಿಬ್ಬಂದಿಗಳು ನೌಕರರು ಹಾಗೂ ಅಧಿಕಾರಿಗಳು ಗುರುವಾರ 1 ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಿದರು.

ಬಿಬಿಎಂಪಿ ಆಯುಕ್ತರು ನೀಡಿದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿದೆ ಎಂದು ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ ಅಮೃತರಾಜ್ ಅವರು ತಿಳಿಸಿದ್ದಾರೆ.

ಪಾಲಿಕೆಯಲ್ಲಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ 318 ಕಾರ್ಮಿಕರ ಸೇವೆ ಖಾಯಂಗೊಳಿಸುವುದು, ಆರು ಮಂದಿ ಕಂದಾಯ ಅಧಿಕಾರಿಗಳ ಅಮಾನತು ಹಿಂಪಡೆಯುವುದು, ಖಾಸಗಿ ಆಸ್ಪತ್ರೆಗೆ 65 ಲಕ್ಷ ರೂಪಾಯಿ ಬಾಕಿ ಪಾವತಿಸುವುದು ಸೇರಿದಂತೆ ಮುಂತಾದ ಕೆಲವು ಬೇಡಿಕೆಗಳನ್ನು ಈಡೇರಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಎ ಅಮೃತರಾಜ್ ಹೇಳಿದರು.

ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿರುವ 10 ಸಾವಿರ ಹುದ್ದೆಗಳ ಭರ್ತಿ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಪಾಲಿಕೆಯಲ್ಲಿ 2007ರಿಂದ ಗುತ್ತಿಗೆ ಆಧಾರದ ಮೇಲೆ 318 ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಅವರನ್ನು ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಬೇಡಿಕೆ ಇತ್ತು. ಈ ಬಗ್ಗೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರ ಹೊರತಾಗಿ, ಡಿಲಿಮಿಟೇಶನ್ ನಂತರ ಹೊಸದಾಗಿ ಸೇರ್ಪಡೆಯಾದ ಬಿಬಿಎಂಪಿ ವಾರ್ಡ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳ ನೇಮಿಸುವಂತೆಯೂ ಒತ್ತಾಯಿಸಲಾಗಿತ್ತು. ಹೊಸ ವಾರ್ಡ್ ಗಳಿಗೆ 2,000 ಸಿಬ್ಬಂದಿಗಳ ಅಗತ್ಯವಿದೆ. ಈ ಬೇಡಿಕೆಯನ್ನೂ ಪರಿಶೀಲಿಸುವುದಾಗಿ ಆಯುಕ್ತರು ಒಪ್ಪಿದ್ದಾರೆಂದು ಹೇಳಿದರು.

ಮುಷ್ಕರ ಹಿನ್ನೆಲೆಯಲ್ಲಿ ಗುರುವಾರ 10 ಗಂಟೆಯವರೆಗೆ ಕೆಲಸ ಮಾಡದಿದ್ದ ಕಾರಣ 1 ಗಂಟೆ ಹೆಚ್ಚುವರಿ ಕೆಲಸ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com