ಏರೋ ಇಂಡಿಯಾ ನವ ಭಾರತದ ಶಕ್ತಿಯನ್ನು ತೋರಿಸುತ್ತಿದ್ದು, ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ: ಪ್ರಧಾನಿ ಮೋದಿ

ಏರೋ ಇಂಡಿಯಾ ಶೋ ನವ ಭಾರತದ ಶಕ್ತಿಯನ್ನು ತೋರಿಸುತ್ತಿದ್ದು, ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ದೇಶದ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ
ದೇಶದ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ

ಬೆಂಗಳೂರು: ಏರೋ ಇಂಡಿಯಾ ಶೋ ನವ ಭಾರತದ ಶಕ್ತಿಯನ್ನು ತೋರಿಸುತ್ತಿದ್ದು, ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

ಬೆಂಗಳೂರು ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಚಾಲನೆ ನೀಡಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣ ಮಾಡಿದರು.

ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವ ಭಾರತದ ಸತ್ಯ ಎಂಬುದಕ್ಕೆ ಬೆಂಗಳೂರಿನ ಆಕಾಶವೇ ಸಾಕ್ಷಿಯಾಗಿದೆ. ಇಂದು, ರಾಷ್ಟ್ರವು ಹೊಸ ಎತ್ತರವನ್ನು ತಲುಪುತ್ತಿದೆ ಎಂದು ಹೇಳಿದರು.

ಏರೋ ಇಂಡಿಯಾವನ್ನು ಒಂದು ಸಮಯದಲ್ಲಿ ಕೇವಲ ಪ್ರದರ್ಶನಕ್ಕೆ ಸೀಮಿತ ಎಂದು ಭಾವಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ದೃಷ್ಟಿಕೋನ ಬದಲಾಗಿದೆ. ನವಭಾರತದ ನವಮಾರ್ಗವನ್ನು ಏರೋ ಇಂಡಿಯಾ ಪ್ರತಿಫಲಿಸುತ್ತದೆ. ಇವತ್ತು ಇದು ಕೇವಲ ಶೋ ಮಾತ್ರವಲ್ಲ ಭಾರತದ ಶಕ್ತಿಯೂ ಆಗಿದೆ. ಭಾರತದ ರಕ್ಷಣಾ ಉದ್ಯಮದ ಬೆಳವಣಿಗೆ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕವಾಗಿದೆ ಎಂದು ತಿಳಿಸಿದರು.

21ನೇ ಶತಮಾನದ ನವಭಾರತವು ಯಾವುದೇ ಅವಕಾಶ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಕಠಿಣ ಪರಿಶ್ರಮ ಹಾಕಲೂ ಹಿಂದೆಮುಂದೆ ನೋಡುವುದಿಲ್ಲ. ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿ ತರುತ್ತಿದ್ದೇವೆ. ರಕ್ಷಣಾ ಕ್ಷೇತ್ರ ಇಂದು ಅತ್ಯಂತ ಪ್ರಬಲ ವಲಯವಾಗಿ ಬೆಳೆದಿದೆ ಎಂದು ಅವರು ಹೇಳಿದರು.

ಭಾರತವು ಈಗ ಆಮದು ಮಾಡುವುದಿಲ್ಲ. ಈಗ ರಫ್ತು ಮಾಡುತ್ತಿದೆ. ನಾವು ಸಾಕಷ್ಟು ಯಶಸ್ಸು ಸಾಧಿಸುತ್ತಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಯಾರದ್ದು ಇದೆಯೋ ಅವರದ್ದೇ ಮೇಲುಗೇ ಇರುತ್ತದೆ. ಭಾರತದಲ್ಲಿ 8-9 ವರ್ಷದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಭಾರತವು 2025ರ ಹೊತ್ತಿಗೆ ರಫ್ತು ಪ್ರಮಾಣವನ್ನು 5 ಬಿಲಿಯನ್ ಡಾಲರ್‌ಗೆ ತೆಗೆದುಕೊಂಡು ಹೋಗಲಿದೆ.

ಭಾರತವು ಲಾಂಚ್ ಪ್ಯಾಡ್ ತರಹ ಕೆಲಸ ಮಾಡಲಿದೆ. ಭಾರತವು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳಲಿದೆ. ಭಾರತವು ಸರ್ಕಾರವು ಆಹ್ವಾನ ನೀಡುತ್ತಿದೆ. ಖಾಸಗಿ ಕಂಪನಿಗಳು ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು. ಆ ಮೂಲಕ ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ರೂಪಿಸಬೇಕು ಎಂದರು.

ಅಮೃತ್ ಕಾಲದಲ್ಲಿ ಭಾರತವು ಪೈಲಟ್ ತರಹ ಮುಂದೆ ಹೋಗುತ್ತಿದೆ. ಇಂದಿನ ಭಾರತವು ವೇಗವಾಗಿ, ದೂರದ ಬಗ್ಗೆ ಯೋಚಿಸುತ್ತದೆ, ತ್ವರಿತವಾಗಿ ನಿರ್ಧರಿಸುತ್ತದೆ. ಭಾರತದ ವೇಗ ಎಷ್ಟೇ ವೇಗವಾಗಿರಲಿ, ಎಷ್ಟೇ ಎತ್ತರಕ್ಕೆ ಏರಲಿ. ಯಾವಾಗಲೂ ತನ್ನ ಬೇರುಗಳಿಗೆ ಅಂಟಿಕೊಂಡಿರುತ್ತದೆ. ಇದನ್ನೇ ನಮ್ಮ ಪೈಲಟ್ ಕೂಡ ಮಾಡುತ್ತಾರೆ. ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆಯಾಗುತ್ತಿದೆ. ಎಲ್ಲದಕ್ಕೂ ಬೆಂಬಲ ನೀಡುತ್ತದೆ. ಭಾರತದಲ್ಲಿನ ಸುಧಾರಣೆಗಳಿಂದ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ.

ಭಾರತದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ನಿಯಮಗಳನ್ನು ಸರಳಗೊಳಿಸಲಾಗಿದೆ. ಉದ್ಯೋಗ ಪ್ರಕ್ರಿಯೆ ಸರಳಗೊಳಿಸಲಾಗಿದೆ. ವ್ಯಾಲಿಡಿಟಿ ಹೆಚ್ಚಿಸಲಾಗಿದೆ. ಬಜೆಟ್‌ನಲ್ಲಿ ತೆರಿಗೆಯನ್ನ ಕಡಿಮೆ ಮಾಡಲಾಗಿದೆ. ಇದರ ಲಾಭ ಪಡೆದುಕೊಳ್ಳಬೇಕು. ಭಾರತದಲ್ಲಿ ರಕ್ಷಣಾ ಸೆಕ್ಟರ್ ಬಲಗೊಳಿಸುವ ಪ್ರಯತ್ನ ಮುಂದೆಯು ನಡೆಯಲಿದೆ. ನಾವೆಲ್ಲ ಜತೆಗೂಡಿ ಮುಂದೆ ಹೋಗಬೇಕಾಗಿದೆ. ಮುಂದೆಯೂ ಭವ್ಯ ಏರೋ ಇಂಡಿಯಾ ಆಯೋಜಿಸುವ ಆಶಾ ಭಾವನೆಯನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com