ಕರ್ನಾಟಕ: SSLC, PUC ವಿದ್ಯಾರ್ಥಿಗಳಿಗೆ ಸಿಹಿಸುದ್ದಿ, ಈ ವರ್ಷವೂ ಸಿಗಲಿದೆ ಕೃಪಾಂಕ
2022-23ನೇ ಸಾಲಿನ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಕೃಪಾಂಕ ನೀಡಲಿದೆ ಎನ್ನಲಾಗಿದೆ.
Published: 26th February 2023 04:31 PM | Last Updated: 26th February 2023 04:31 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: 2022-23ನೇ ಸಾಲಿನ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಕೃಪಾಂಕ ನೀಡಲಿದೆ ಎನ್ನಲಾಗಿದೆ.
ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು. ಇದೇ ಕೃಪಾಂಕವನ್ನು ಈ ವರ್ಷವೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಒಟ್ಟಾರೆ ಕನಿಷ್ಠ ಅಂಕ ಗಳಿಸುವ ಎಸ್‍ಎಸ್ ಎಲ್‍ಸಿ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಕೃಪಾಂಕವನ್ನು ನೀಡಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಎಸ್ ಸಿ/ಎಸ್ಟಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಹಾಸ್ಟೆಲ್‌ಗಳಲ್ಲಿ ಸೌಲಭ್ಯಗಳ ಕೊರತೆ: ಸಿಎಜಿ ವರದಿ
ಅಂದಹಾಗೇ ಈ ಕೃಪಾಂಕವನ್ನು ಕೋವಿಡ್ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಬಂದಿಲ್ಲ. ಚೇತರಿಕೆಯನ್ನು ಕಂಡಿರದ ಕಾರಣ 2023ರಲ್ಲಿಯೂ ಕೃಪಾಂಕ ನೀಡಲು ನಿರ್ಧರಿಸಲಾಗಿದೆ. 2019ರ ವರೆಗೆ ಶೇಕಡ 5 ರಷ್ಟು ಕೃಪಾಂಕಗಳನ್ನು ನೀಡಲಾಗುತ್ತಿತ್ತು ಎಂದು ಮಂಡಳಿ ಮಾಹಿತಿ ನೀಡಿದೆ. ಕೊರೊನಾ ಕಾರಣದಿಂದ 2020 ರಲ್ಲಿ ಪರೀಕ್ಷೆ ನಡೆಸರಲಿಲ್ಲ. 2021ರಲ್ಲಿ ಎಲ್ಲರನ್ನೂ ಪಾಸ್ ಮಾಡಲಾಗಿತ್ತು. 2022ರಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲಾಗಿತ್ತು. ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಈ ವರ್ಷವೂ ಕೃಪಾಂಕ ಸಿಗಲಿದೆ. ಒಟ್ಟಾರೆ ಕನಿಷ್ಠ ಅಂಕ ಗಳಿಸುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಕೃಪಾಂಕ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಣಯಿಸಿದೆ.
ಎಸ್‍ಎಸ್‍ಎಲ್‍ಸಿಯಲ್ಲಿ 6 ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ, ಉಳಿದ ಮೂರು ವಿಷಯಗಳಿಗೆ ಕನಿಷ್ಠ 1 ರಿಂದ ಗರಿಷ್ಠ 26 ಅಂಕಗಳವರೆಗೆ ಕೃಪಾಂಕ ದೊರೆಯಲಿದೆ. ಆದರೆ, 625 ಅಂಕಗಳಿಗೆ ಕನಿಷ್ಠ 219 ಅಂಕ ಪಡೆಯಲು ಬೇಕಾಗುವ ಅಂಕಗಳನ್ನು ನೀಡಲಿದೆ. 100 ಅಂಕಗಳ ಪರೀಕ್ಷೆಯಲ್ಲಿ 20 ಅಂಕಗಳಿಗೆ ಮೌಖಿಕ ಮತ್ತು 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಪಡೆದಿರಬೇಕು. ಆದರೆ, ಕೆಲವು ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಕೆಲವು ವಿಷಯಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿರುತ್ತಾರೆ.
ಇತಂಹ ವಿದ್ಯಾರ್ಥಿಗಳಿಗೆ ಕೃಪಾಂಕ ನೆರವಾಗಲಿದೆ. ಉತ್ತೀರ್ಣರಾಗಲು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಬಾರದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿಸ್ನೇಹಿಯಾಗಿ ನಿಯಮ ರೂಪಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿಯಲ್ಲಿ 600 ಅಂಕಗಳಿಗೆ ಕನಿಷ್ಠ 210 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಶೇಕಡ 5 ರಷ್ಟು ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕಗಳನ್ನು ಪಡೆಯಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮËಲ್ಯನಿರ್ಣಯ ಮಂಡಲಿ ತಿಳಿಸಿದೆ.