
ಸಂಗ್ರಹ ಚಿತ್ರ
ಬೆಂಗಳೂರು: ಖಾಸಗಿ ಬಸ್ ಹರಿದು ಮಹಿಳೆ ಸಾವನ್ನಪ್ಪಿರುವ ಭೀಕರ ಘಟನೆ ಯಶವಂತಪುರದಲ್ಲಿರುವ ಗೋವರ್ಧನ ಚಿತ್ರಮಂದಿರದ ಮುಂಭಾಗದಲ್ಲಿ ಮಂಗಳವಾರ ನಡೆದಿದೆ.
ಮೃತ ಮಹಿಳೆಯನ್ನು ವಿನುತಾ (32) ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ವಿನುತಾ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ದ್ವಿಚಕ್ರ ವಾಹನಕ್ಕೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವಿನುತಾ ಅವರು ಕೆಳಕ್ಕೆ ಬಿದ್ದಿದ್ದರು. ಈ ವೇಳೆ ವಿನುತಾ ಅವರ ತಲೆಯ ಮೇಲೆ ಬಸ್ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವು
ಸುದ್ದಿ ತಿಳಿಯುತ್ತಿದ್ದಂತೆಯೇ ಯಶವಂತಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಹೊಸಕೋಟೆ ನಗರದ ಎಂವಿಜೆ ಕಾಲೇಜು ಬಳಿ ಸರಣಿ ಸಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಹೊಸಕೋಟೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಎಂವಿಜೆ ಕಾಲೇಜು ಬಳಿ ಸರಣಿ ಅಪಘಾತವಾಗಿದೆ. ಕ್ಯಾಂಟರ್ ಚಾಲಕ ದಿಡೀರ್ ಬ್ರೇಕ್ ಹಾಕಿದ್ದು, ಬ್ರೇಕ್ ಹಾಕುತ್ತಿದ್ದಂತೆ ಹಿಂದೆ ಬರುತ್ತಿದ್ದ ಟಿಟಿ ವಾಹನ ಹಾಗೂ ಪಲ್ಸರ್ ಬೈಕ್ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ಹಾಗೂ ಬೈಕ್ ನುಜುಗುಜ್ಜಾಗಿದೆ.
ಘಟನೆಯಲ್ಲಿ ಬೈಕ್ ಸವಾರರಿಗೆ ಹಾಗೂ ಕ್ಯಾಂಟರ್ ಚಾಲಕನಿಗೆ ಗಾಯಗಳಾಗಿದ್ದು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.