74ನೇ ಗಣರಾಜ್ಯೋತ್ಸವ ಆಚರಣೆಗೆ ನಗರ ಸಜ್ಜು: 8 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

ಬೆಂಗಳೂರಿನಲ್ಲಿ 74ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಜಿಲ್ಲಾಡಳಿತ ಮಂಡಳಿ ನಿರ್ಧರಿಸಿದ್ದು, ಗಣರಾಜ್ಯೋತ್ಸವ ಆಚರಣೆಗೆ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ಸಜ್ಜುಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ 74ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಜಿಲ್ಲಾಡಳಿತ ಮಂಡಳಿ ನಿರ್ಧರಿಸಿದ್ದು, ಗಣರಾಜ್ಯೋತ್ಸವ ಆಚರಣೆಗೆ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ಸಜ್ಜುಗೊಂಡಿದೆ. ಕಾರ್ಯಕ್ರಮದಲ್ಲಿ 8 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆಗಳಿದ್ದು, ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

ಗಣರಾಜ್ಯೋತ್ಸವ ಸಿದ್ಧತೆಗಳ ಕುರಿತು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಮಾಹಿತಿ ನೀಡಿದ್ದು, ಜನವರಿ 26 ರಂದು ನಡೆಯುವ ಪರೇಡ್‌ನಲ್ಲಿ ಕೆಎಸ್‌ಆರ್‌ಪಿ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ ಮತ್ತು ವಿವಿಧ ಶಾಲಾ ಮಕ್ಕಳು ಸೇರಿದಂತೆ 1,520 ಸಿಬ್ಬಂದಿಯನ್ನು ಒಳಗೊಂಡ 38 ಸ್ಕ್ವಾಡ್‌ಗಳು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ನಗರದ ಉತ್ತರಹಳ್ಳಿ ಸರ್ಕಾರಿ ಶಾಲೆಯ 750 ಶಾಲಾ ಮಕ್ಕಳು ಸಂವಾದ, ಹಾಡುಗಳು ಮತ್ತು ನೃತ್ಯವನ್ನು ಒಳಗೊಂಡ ವಿಶೇಷ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.

ಮಂಗಳವಾರ ಅಭ್ಯಾಸದ ಅಂಗವಾಗಿ ಮೈದಾನದಲ್ಲಿ ರೈತರಿಗೆ ಸಮರ್ಪಿತ ಹಾಡುಗಳು, ಕಲರಿಪಯಟ್ಟು ಮತ್ತು ಸಶಸ್ತ್ರ ಪಡೆಗಳಿಂದ ಮೋಟಾರ್ ಸೈಕಲ್ ಸ್ಟಂಟ್‌ಗಳು ನಡೆದವು.

ಗುರುವಾರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಗೆ ಸುಮಾರು 3,000 ಆಸನಗಳು, ಗಣ್ಯ ಅತಿಥಿಗಳಿಗೆ 2,000 ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಕ್ಷಣಾ ಸಿಬ್ಬಂದಿಗೆ 750 ಆಸನಗಳು ಮತ್ತು ಇತರ ಇಲಾಖೆ ಅಧಿಕಾರಿಗಳು ಮತ್ತು ನಿವೃತ್ತ ಸೇನಾ ಅಧಿಕಾರಿಗಳಿಗೆ 2,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೈದಾನ ಮತ್ತು ಸುತ್ತಮುತ್ತ ಭದ್ರತಾ ತಪಾಸಣೆ ನಡೆಸಲಾಗಿದೆ. ಸಮೀಪದ ಬಹುಮಹಡಿ ಕಟ್ಟಡಗಳು ಮತ್ತು ಕಾಮಗಾರಿ ನಡೆಯುತ್ತಿರುವ ಸ್ಥಳಗಳನ್ನು ಪರಿಶೀಲಿಸಲಾಗಿದೆ ಎಂದು ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ಕಳೆದ ಕೆಲವು ದಿನಗಳಿಂದಲೂ ನಗರದಾದ್ಯಂತ ನಿರಂತರ ತಪಾಸಣೆಗಳ ನಡೆಸಲಾಗುತ್ತಿದೆ. "ಭದ್ರತಾ ಸಿಬ್ಬಂದಿ ಮೈದಾನದ ಎಲ್ಲಾ ನಾಲ್ಕು ಗೇಟ್‌ಗಳ ಮೇಲೆ ನಿಗಾ ಇರಿಸಿದ್ದಾರೆ. ಮೈದಾನದ ಒಳಗೆ ಅಥವಾ ಸುತ್ತಲೂ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ವ್ಯಕ್ತಿ ಕಂಡುಬಂದರೆ, ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರ ಬಳಿಕ ಮನವಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com