ಉಸಿರುಗಟ್ಟಿಸಿ ಯುವತಿ ಹತ್ಯೆ: ನೇಣು ಬಿಗಿಯಲು ಯತ್ನಿಸಿದ್ದ ಪ್ರಿಯಕರ ಪರಾರಿ, ಆರೋಪಿ ಬಂಧನಕ್ಕೆ ಪೊಲೀಸ್ ಕಾರ್ಯಾಚರಣೆ
ರಾಜಧಾನಿ ಬೆಂಗಳೂರಿನಲ್ಲಿ ಪ್ರಿಯಕರನೇ ಪ್ರಿಯತಮೆಯನ್ನು ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಉಸಿರುಗಟ್ಟಿಸಿ ಯುವತಿ ಹತ್ಯೆ ಮಾಡಿ ಬಳಿಕ ಆಕೆಯನ್ನು ನೇಣು ಬಿಗಿಯಲು ಯತ್ನಿಸಿದ್ದ ಪ್ರಿಯಕರನನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
Published: 10th June 2023 12:23 PM | Last Updated: 10th June 2023 12:23 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರಿಯಕರನೇ ಪ್ರಿಯತಮೆಯನ್ನು ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಉಸಿರುಗಟ್ಟಿಸಿ ಯುವತಿ ಹತ್ಯೆ ಮಾಡಿ ಬಳಿಕ ಆಕೆಯನ್ನು ನೇಣು ಬಿಗಿಯಲು ಯತ್ನಿಸಿದ್ದ ಪ್ರಿಯಕರನನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಜೀವನ್‌ಬಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಆಕಾಂಕ್ಷಾ ಬಿದ್ಯಾಸರ್ (23) ಎಂಬುವವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದ್ದು, ಪ್ರಿಯಕರ ಅರ್ಪಿತ್ ಗುರಿಜಾಲ್ (29) ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ. ‘ಹೈದರಾಬಾದ್‌ನ ಆಕಾಂಕ್ಷಾ, ಬಿ.ಕಾಂ. ಪದವೀಧರರು. ನಗರದ ಮಾರುಕಟ್ಟೆ ವಿಸ್ತರಣೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೋಡಿಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಸ್ನೇಹಿತೆ ಜೊತೆ ನೆಲೆಸಿದ್ದರು. ಇದೇ ಫ್ಲ್ಯಾಟ್‌ನಲ್ಲಿಯೇ ಸೋಮವಾರ ಆಕಾಂಕ್ಷಾ ಅವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಅರ್ಪಿತ್ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ: ವ್ಯಕ್ತಿಗೆ ಯುವತಿಯಿಂದ ಚಪ್ಪಲಿ ಏಟು, ವಿಡಿಯೊ ವೈರಲ್
‘ದೆಹಲಿಯ ಅರ್ಪಿತ್, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಆಕಾಂಕ್ಷಾ ಕೆಲಸ ಮಾಡುತ್ತಿದ್ದ ಕಂಪನಿಗೆ ಸೇರಿದ್ದ. ಸಹೋದ್ಯೋಗಿಗಳಾಗಿದ್ದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ನಂತರ, ಇಬ್ಬರೂ ಪ್ರೀತಿಸಲಾರಂಭಿಸಿದ್ದರು. ಆರಂಭದಲ್ಲಿ ಒಂದೇ ಮನೆಯಲ್ಲಿ ಸಹ ಜೀವನ ನಡೆಸುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ನಗರ ತೊರೆದಿದ್ದ ಅರ್ಪಿತ್, ಹೈದರಾಬಾದ್‌ನಲ್ಲಿರುವ ಕಂಪನಿಗೆ ಕೆಲಸಕ್ಕೆ ಸೇರಿದ್ದ. ಒಂಟಿಯಾದ ಆಕಾಂಕ್ಷಾ, ಸ್ನೇಹಿತೆ ಜೊತೆ ಸೇರಿ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಆರೋಪಿ ಆಗಾಗ ಆಕಾಂಕ್ಷಾ ಅವರನ್ನು ಭೇಟಿಯಾಗುತ್ತಿದ್ದ. ಭೇಟಿ ವಿಚಾರವಾಗಿ ಇಬ್ಬರ ನಡುವೆ ಇತ್ತೀಚೆಗೆ ವೈಮನಸ್ಸು ಮೂಡಿತ್ತು. ಪ್ರತಿ ಬಾರಿ ಮೊಬೈಲ್‌ನಲ್ಲಿ ಮಾತನಾಡುವಾಗಲೂ ಇಬ್ಬರೂ ಜಗಳವಾಡುತ್ತಿದ್ದರು. ಈ ಬಗ್ಗೆ ಸ್ನೇಹಿತೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಸಿಡಿಲು ಬಡಿದು ಇಬ್ಬರು ರೈತರ ಸಾವು
ಹತ್ಯೆ ಬಳಿಕ ನೇಣು ಬಿಗಿಯಲು ಯತ್ನ:
‘ಆರೋಪಿ ಅರ್ಪಿತ್, ಸೋಮವಾರ ಬೆಂಗಳೂರಿಗೆ ಬಂದಿದ್ದ. ಆಕಾಂಕ್ಷಾ ಜೊತೆ ನಗರದ ಹಲವೆಡೆ ಸುತ್ತಾಡಿದ್ದ. ಮಧ್ಯಾಹ್ನ ಇಬ್ಬರೂ ಫ್ಲ್ಯಾಟ್‌ಗೆ ಬಂದಿದ್ದರು. ಪುನಃ ಜಗಳ ಶುರುವಾಗಿದೆ. ಇದೇ ಸಂದರ್ಭದಲ್ಲಿ ಆರೋಪಿ, ಆಕಾಂಕ್ಷಾ ಮೇಲೆ ಹಲ್ಲೆ ಮಾಡಿ ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕೊಲೆ ಬಳಿಕ ಮೃತದೇಹದ ಕುತ್ತಿಗೆಗೆ ಬಟ್ಟೆ ಕಟ್ಟಿದ್ದ ಆರೋಪಿ, ಫ್ಯಾನ್‌ಗೆ ನೇಣು ಬಿಗಿಯಲು ಯತ್ನಿಸಿದ್ದ. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮೃತದೇಹವನ್ನು ನೆಲದ ಮೇಲೆಯೇ ಮಲಗಿಸಿ ಫ್ಲ್ಯಾಟ್‌ನಿಂದ ಪರಾರಿಯಾಗಿದ್ದಾನೆ. ಸ್ನೇಹಿತೆ ಸಂಜೆ ಫ್ಲ್ಯಾಟ್‌ಗೆ ವಾಪಸು ಬಂದಿದ್ದಾಗ ಮೃತದೇಹ ಕಂಡಿತ್ತು. ‘ಸ್ನೇಹಿತೆಯೇ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಸಾಗಿಸಿದ್ದಾರೆ. ‘ಮಗಳದ್ದು ಕೊಲೆ’ ಎಂದು ತಂದೆ ದೂರು ನೀಡಿದ್ದಾರೆ. ಪರಾರಿಯಾಗಿರುವ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಹೇಳಿದರು.