ಇಂದು ಬಿಬಿಎಂಪಿ ಬಜೆಟ್: ರಸ್ತೆ ನಿರ್ವಹಣೆ, ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವಂತೆ ನಾಗರೀಕರು, ತಜ್ಞರು ಒತ್ತಾಯ

ಬಿಬಿಎಂಪಿಯ 2023-24ನೇ ಆಯವ್ಯಯ ಮಂಡನೆಗೆ ಗುರುವಾರ ಮುಹೂರ್ತ ನಿಗದಿಯಾಗಿದ್ದು, ಬರೋಬ್ಬರಿ 11 ಸಾವಿರ ಕೋಟಿ ರೂಪಾಯಿ ಗಾತ್ರಯ ಆಯವ್ಯಯ ಮಂಡನೆಯಾಗುವ ಸಾಧ್ಯತೆಗಳಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿಯ 2023-24ನೇ ಆಯವ್ಯಯ ಮಂಡನೆಗೆ ಗುರುವಾರ ಮುಹೂರ್ತ ನಿಗದಿಯಾಗಿದ್ದು, ಬರೋಬ್ಬರಿ 11 ಸಾವಿರ ಕೋಟಿ ರೂಪಾಯಿ ಗಾತ್ರಯ ಆಯವ್ಯಯ ಮಂಡನೆಯಾಗುವ ಸಾಧ್ಯತೆಗಳಿವೆ.

ಪುರಭವನದಲ್ಲಿ ಬಜೆಟ್ ಮಂಡನೆ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದ್ದು, ಬೆಳಿಗ್ಗೆ 11.30ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರ ಸಮಕ್ಷಮದಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ.

ಕಳೆದ ಎರಡು ತಿಂಗಳಿನಿಂದ ರಾಜ್ಯ ಸರ್ಕಾರ ಹಾಗು ಬಿಬಿಎಂಪಿ ಆಡಳಿತಾಧಿಕಾರಿ ಮಾರ್ಗದರ್ಶನದಡಿ 2023-24ನೇ ಸಾಲಿನ ಆಯವ್ಯಯ ಸಿದ್ಧಫಡಿಸಲಾಗಿದೆ.

ಈ ನಡುವೆ ನಗರವಾಸಿಗಳು ಹಾಗೂ ತಜ್ಞರು ಬಜೆಟ್ ನಲ್ಲಿ ರಸ್ತೆ ನಿರ್ವಹಣೆ ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಹೆಚ್ಚಿನ ಗಮನ ನೀಡುವಂತೆ ಒತ್ತಾಯಿಸಿದ್ದಾರೆ.

ನಗರ ವಿನ್ಯಾಸಕ ನರೇಶ್ ನರಸಿಂಹನ್ ಅವರು ಮಾತನಾಡಿ, ಮೊದಲ ಮತ್ತು ಕೊನೆಯ ಮೈಲಿ ಪಾದಚಾರಿ ಚಲನಶೀಲತೆಯ ಮೇಲೆ ಬಿಬಿಎಂಪಿ ಕೇಂದ್ರೀಕರಿಸಬೇಕಿದೆ. ಮೆಟ್ರೊ ನಿಲ್ದಾಣಗಳ 2 ಕಿಮೀ ವ್ಯಾಪ್ತಿಯಿಂದ ಪ್ರಾರಂಭವಾಗುವ ನಗರದ ರಸ್ತೆಗಳನ್ನು ಹೆಚ್ಚು ಪಾದಚಾರಿ ಸ್ನೇಹಿ ಮತ್ತು ನಡೆಯಲು ಅನುಕೂಲವಾಗುವಂತೆ ಮಾಡಲು ಮಳೆನೀರು ಚರಂಡಿಗಳನ್ನು ಬಲಪಡಿಸುವತ್ತ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದ್ದಾರೆ.
 
ಕಾತ್ಯಾಯಿನಿ ಚಾಮರಾಜ್ ಎಂಬುವವರು ಮಾತನಾಡಿ, ಸಾಮಾಜಿಕ ಮೂಲಸೌಕರ್ಯಗಳು, ಅಂಗನವಾಡಿಗಳು, ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬಾಡಿಗೆ ವಸತಿ ಮತ್ತು ಸ್ಲಂ ಪುನರಾಭಿವೃದ್ಧಿಗೆ ಬಿಬಿಎಂಪಿ ಬಜೆಟ್ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದಾರೆ.

ಕೊಳೆಗೇರಿಗಳನ್ನು ಪುನರಾಭಿವೃದ್ಧಿ ಮಾಡುವುದು, ಕೆರೆಗಳನ್ನು ಪುನರುಜ್ಜೀವನಗೊಳಿಸುವುದು, ಅತಿಕ್ರಮಣಗಳನ್ನು ತೆರವುಗೊಳಿಸುವುದು, ಘನತ್ಯಾಜ್ಯವನ್ನು ಸ್ಥಳೀಯವಾಗಿ ಸಂಸ್ಕರಿಸುವುದು ಇತ್ಯಾದಿಗಳ ಮೇಲೆ ಕೇಂದ್ರೀಕರಿಸಬೇಕು ಎಂದು ತಿಳಿಸಿದ್ದಾರೆ.

ಬಿಬಿಎಂಪಿಯು ತನ್ನ ಬಜೆಟ್ ಅನ್ನು ತಾತ್ಕಾಲಿಕ ಪರಿಹಾರಗಳಿಗಿಂತ ಹೆಚ್ಚು ಸುಸ್ಥಿರ ದೀರ್ಘಕಾಲೀನ ಪರಿಹಾರಗಳಿಗೆ ಮೀಸಲಿಡಬೇಕು, ಇದು ದೀರ್ಘಾವಧಿಯಲ್ಲಿ ಸಮಸ್ಯೆಯನ್ನು ದೂರಾಗಿಸುತ್ತದೆ ಮತ್ತು ನಗರದ ಪರಿಸರ ನಾಶವಾಗದಂತೆ ನೋಡಿಕೊಳ್ಳುತ್ತದೆ ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿಯ ಸಹ ಸಂಸ್ಥಾಪಕಿ ಪ್ರೀತಿ ಸುಂದರರಾಜನ್ ಅವರು ಅಭಿಪ್ರಾಯಪಟ್ಟಿದ್ದಾರೆ.

"ಉತ್ತಮ ಉಪನಗರ ರೈಲು, ಬಿಎಂಟಿಸಿ ಬಸ್ಸುಗಳು, ಉತ್ತಮ ಮೆಟ್ರೋ ಸಂಪರ್ಕಗಳು, ಉತ್ತಮ ಪಾದಚಾರಿ ಮಾರ್ಗಗಳಂತಹ ಸುಸ್ಥಿರ ಚಲನಶೀಲ ಯೋಜನೆಗಳಿಗೆ ಬಜೆಟ್ ಅನ್ನು ಹೆಚ್ಚಿಸಕಬೇಕಿದೆ ಎಂದು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಬಜೆಟ್ ವೀಕ್ಷಿಸಬಹುದು...
ಪುರಭವನದಲ್ಲಿ ಇಂದು ಮಂಡನೆಯಾಗುತ್ತಿರುವ ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯವನ್ನು ಆನ್'ಲೈನ್  ನಲ್ಲಿ ವೀಕ್ಷಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಿಬಿಎಂಪಿಯ ಅಧಿಕೃತ ವೆಬ್ ಸೈಟ್  https://bbmp.gov.in ಜೊತೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರ ಫೇಸ್'ಬುಕ್, ಟ್ವಿಟರ್ ಮತ್ತು ಯೂಟ್ಯೂಬ್ https://www.youtube.com/watch?v=HyYKHmwOU6s ನಲ್ಲಿ ಸಾರ್ವಜನಿಕರು ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com