ಸ್ಥಳೀಯರ ಹೋರಾಟಕ್ಕೆ ಸಿಕ್ಕ ಜಯ: ಕೊನೆಗೂ ಸ್ಯಾಂಕಿ ಮೇಲ್ಸೇತುವೆ ಯೋಜನೆಗೆ ಬಿಬಿಎಂಪಿ ತಡೆ

ಸ್ಥಳೀಯ ನಿವಾಸಿಗಳ ತೀವ್ರ ವಿರೋಧ, ಹೋರಾಟಕ್ಕೆ ಕೊನೆಗೂ ಮಣಿದ ಬಿಬಿಎಂಪಿ, ಸ್ಯಾಂಕಿ ಮೇಲ್ಸೇತುವೆ ಯೋಜನೆಗೆ ಗುರುವಾರ ತಡೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಥಳೀಯ ನಿವಾಸಿಗಳ ತೀವ್ರ ವಿರೋಧ, ಹೋರಾಟಕ್ಕೆ ಕೊನೆಗೂ ಮಣಿದ ಬಿಬಿಎಂಪಿ, ಸ್ಯಾಂಕಿ ಮೇಲ್ಸೇತುವೆ ಯೋಜನೆಗೆ ಗುರುವಾರ ತಡೆ ನೀಡಿದೆ.

ಯೋಜನೆಗೆ ತಡೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಯೋಜನೆಯನ್ನು ಪರಿಶೀಲನೆ ನಡೆಸುವಂತೆ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ)ಕ್ಕೆ ಆದೇಶಿಸಿದ್ದಾರೆ.

ನಿನ್ನೆಯಷ್ಟೇ ಮಲ್ಲೇಶ್ವರ, ವೈಯಾಲಿಕಾವಲ್‌, ಸದಾಶಿವನಗರದ ನಿವಾಸಿಗಳ ಕಲ್ಯಾಣ ಸಂಘಗಳ ಸದಸ್ಯರು ಹಾಗೂ ಸ್ಯಾಂಕಿ ಕೆರೆ ತಂಡದವರು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತುಷಾರ್‌ ಗಿರಿನಾಥ್‌ ಅವರು, ಮರಗಳ ಕಡಿತ ಮಾಡುವ ಯೋಜನೆ ಇದೀಗ ಬಿಎಲ್‌ಟಿಎಯಲ್ಲಿದೆ. ಅಲ್ಲಿ ತೀರ್ಮಾನವಾಗುವವರೆಗೂ ಮರ ಕಡಿಯಲು ಅನುಮತಿ ನೀಡುವ ಪ್ರಕ್ರಿಯೆ ನಡೆಯುವುದು ಬೇಡ ಎಂದು ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸೂಚನೆಯನ್ನು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೂ ನೀಡಿದರು.

ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ ದೀರ್ಘಾವಧಿಯ ಪರಿಹಾರವನ್ನು ಹುಡುಕುತ್ತಿದೆ. ನಗರದ ಸಂಚಾರ ದಟ್ಟಣೆ ಪರಿಸ್ಥಿತಿಯನ್ನು ಸುಧಾರಿಸಲು ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ನಾಗರಿಕರಿಗೆ ಏನು ಬೇಕೋ ಅದನ್ನು ಮಾಡುತ್ತಿದ್ದೇವೆ. ಪ್ರಸ್ತುತ ಬಿಎಂಎಲ್‌ಟಿಎ ಯೋಜನೆಯನ್ನು ಪರಿಶೀಲಿಸುತ್ತಿದೆ. ಅವರು ಯೋಜನೆಗೆ ಒಪ್ಪಿಗೆ ನೀಡಿದರೆ ಮಾತ್ರ ಅದನ್ನು ಮುಂದುವರಿಸಲಾಗುವುದು ಪ್ರಹ್ಲಾದ್ ಅವರು ಹೇಳಿದರು.

ಯೋಜನೆಗೆ ತಡೆ ನೀಡಿರುವ ಹಿನ್ನೆಲೆಯಲ್ಲಿ ಸಿಟಿಜನ್ಸ್ ಫಾರ್ ಸ್ಯಾಂಕಿ ಸದಸ್ಯರು ನಿಟ್ಟಿಸಿರು ಬಿಟ್ಟಿದ್ದಾರೆ. ಯೋಜನೆ ಪರಿಶೀಲಿಸಿಲು ಬಿಎಲ್‌ಟಿಎಯು ಸಮಿತಿ ರಚನೆ ಮಾಡಲಿದೆ. ಯೋಜನೆ ಬಗ್ಗೆ ಬಿಬಿಎಂಪಿ ನಾಗರೀಕರಿಗೆ ಹೆಚ್ಚಿನ ಮಾಹಿತಿಗಳನ್ನು ನೀಡಿಲ್ಲ. ಆದರೆ, ಸ್ವತಂತ್ರ ಪರಿಸರ ಸಮೀಕ್ಷೆ ವರದಿಗಳ ಆಧಾರವನ್ನು ನೋಡಿದರೆ, ಯೋಜನೆಗಾಗಿ 55 ದೊಡ್ಡ ಮರಗಳು, 400 ಸಣ್ಣ ಸಣ್ಣ ಮರಗಳನ್ನು ಕತ್ತರಿಸಲಾಗುತ್ತದೆ ಎಂದು ತಿಳಿದುಬಂದಿದೆ. ನಮ್ಮ ಕಾಳಜಿ ಕೇವಲ ಮರಗಳನ್ನು ರಕ್ಷಣೆ ಮಾಡುವುದಷ್ಟೇ ಅಲ್ಲ, ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆ ಉಳಿಸುವುದಾಗಿದೆ. ನ್ಯಾಯಾಲಯದ ನಿರ್ದೇಶನದಂತೆ, ಕೆರೆ ಕಟ್ಟೆಗಳ ಮೇಲೆ ನಿರ್ಮಾಣವನ್ನು ಕೈಗೆತ್ತಿಕೊಳ್ಳುವುದು ಕಾನೂನುಬಾಹಿರವಾಗಿದೆ. ಸ್ಯಾಂಕಿ ಟ್ಯಾಂಕ್ ಮಾತ್ರವಲ್ಲದೆ ಎಲ್ಲಾ ಜಲಮೂಲಗಳನ್ನು ವಾಣಿಜ್ಯೀಕರಣದಿಂದ ಉಳಿಸಲು ನಾವು ಕಾನೂನು ಮೊರೆ ಹೋಗುವುದರ ಕುರಿತು ಚಿಂತನೆ ನಡೆಸುತ್ತಿದ್ದೇವೆಂದು ಸದಸ್ಯರೊಬ್ಬರು ಹೇಳಿದ್ದಾರೆ.

"ಈ ಮೇಲ್ಸೇತುವೆ ಮತ್ತು ರಸ್ತೆ ವಿಸ್ತರಣೆ ಯೋಜನೆಗಳನ್ನು ಸಂಪೂರ್ಣವಾಗಿ ರದ್ದುಪಡಿಸುವವರೆಗೆ ನಮ್ಮ ಹೋರಾಟಗಳು ನಿಲ್ಲಿವುದಿಲ್ಲ. ಅವೈಜ್ಞಾನಿಕ ಯೋಜನೆ ಮತ್ತು ನಿರ್ಮಾಣದಿಂದ ಸ್ಯಾಂಕಿ ಟ್ಯಾಂಕ್ ಅನ್ನು ರಕ್ಷಣೆ ಮಾಡಲು ಮತ್ತಷ್ಟು ಹೋರಾಟಗಳು ನಡೆಯುತ್ತವೆ ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿಯ ಸದಸ್ಯೆ ಕಿಮ್ಸುಕಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com