ಭಾರಿ ಮಳೆಗೆ ಬೆಂಗಳೂರಿನಲ್ಲಿ ಸರಣಿ ಅವಘಡ; ನೂರಾರು ಮರಗಳು ಧರೆಗೆ, ಮನೆಗಳು ಜಲಾವೃತ, ವಿದ್ಯುತ್ ಕಡಿತ

ಭಾನುವಾರ ಸುರಿದ ಆಲಿಕಲ್ಲು ಮಳೆಯು ನಗರದಾದ್ಯಂತ 109ಕ್ಕೂ ಹೆಚ್ಚು ಮರಗಳು ಮತ್ತು 600ಕ್ಕೂ ಕೊಂಬೆಗಳನ್ನು ನೆಲಕ್ಕುರುಳುವಂತೆ ಮಾಡಿತು. ಅಲ್ಲಲ್ಲಿ ನಿಲ್ಲಿಸಿದ ವಾಹನಗಳನ್ನು ಹಾನಿಗೊಳಿಸಿತು ಮತ್ತು ಸಂಚಾರ ದಟ್ಟಣೆಗೆ ಕಾರಣವಾಯಿತು. 
ಬೆಂಗಳೂರಿನಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ. (ಫೋಟೋ | ಶಶಿಧರ್ ಬೈರಪ್ಪ)
ಬೆಂಗಳೂರಿನಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ. (ಫೋಟೋ | ಶಶಿಧರ್ ಬೈರಪ್ಪ)

ಬೆಂಗಳೂರು: ಭಾನುವಾರ ಸುರಿದ ಆಲಿಕಲ್ಲು ಮಳೆಯು ನಗರದಾದ್ಯಂತ 109ಕ್ಕೂ ಹೆಚ್ಚು ಮರಗಳು ಮತ್ತು 600ಕ್ಕೂ ಕೊಂಬೆಗಳನ್ನು ನೆಲಕ್ಕುರುಳುವಂತೆ ಮಾಡಿತು. ಅಲ್ಲಲ್ಲಿ ನಿಲ್ಲಿಸಿದ ವಾಹನಗಳನ್ನು ಹಾನಿಗೊಳಿಸಿತು ಮತ್ತು ಸಂಚಾರ ದಟ್ಟಣೆಗೆ ಕಾರಣವಾಯಿತು. ಕೆ.ಆರ್.ವೃತ್ತದ ಸರ್ ಎಂ. ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಬಳಿ ದೊಡ್ಡ ಮರವೊಂದು ಬಿದ್ದಿದ್ದು, ಆನಂದ್ ರಾವ್ ವೃತ್ತದಲ್ಲಿಯೂ ಮರವೊಂದು ಬಿದ್ದು ಸ್ಥಳದಲ್ಲಿ ನಿಂತಿದ್ದ ಐಷಾರಾಮಿ ಕಾರು ನಜ್ಜುಗುಜ್ಜಾಗಿದೆ. ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಮುಂಭಾಗ ನಿಂತಿದ್ದ ಕಾರು ಹಾಗೂ ಬೈಕ್ ಮೇಲೆ ಮತ್ತೊಂದು ಮರ ಬಿದ್ದು ಸಂಪೂರ್ಣ ಜಖಂಗೊಂಡಿದೆ.

ಬಿಬಿಎಂಪಿ ಕಂಟ್ರೋಲ್ ರೂಂ ಅಧಿಕಾರಿಗಳ ಪ್ರಕಾರ, 109 ಕ್ಕೂ ಹೆಚ್ಚು ಮರಗಳು ಬುಡಸಮೇತ ಉರುಳಿ ಬಿದ್ದಿದ್ದು, ಮರಗಳ ಕೊಂಬೆಗಳು ಏಕಾಏಕಿ ಬಿದ್ದಿರುವ ಬಗ್ಗೆ ದೂರುಗಳು ಬಂದಿವೆ.

ಮಹಾಲಕ್ಷ್ಮಿ ಲೇಔಟ್‌ನ ಕನಿಷ್ಠ 12 ಮನೆಗಳು ಮತ್ತು ಮಲ್ಲೇಶ್ವರಂನಲ್ಲಿರುವ ಫ್ಯಾಷನ್ ಆಭರಣ ಅಂಗಡಿ ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಮಳೆ ಮತ್ತು ಚರಂಡಿ ನೀರು ನುಗ್ಗಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಳೆಯ ರಭಸಕ್ಕೆ ತಡೆಗೋಡೆ ಕಾಮಗಾರಿಗಾಗಿ ಹಾಕಿದ್ದ ಮರದ ದಿಮ್ಮಿಗಳು ಚರಂಡಿಯೊಳಗೆ ಬಿದ್ದಿದ್ದರಿಂದ ಚರಂಡಿ ಮುಚ್ಚಿಹೋಗಿದೆ. ಈ ಪ್ರದೇಶದ ನಿವಾಸಿಗಳು ಈ ಜಾಗವನ್ನು ಬಟ್ಟೆ ಒಣಗಿಸಲು ಬಳಸುತ್ತಿದ್ದರಿಂದ, ಬಟ್ಟೆಗಳು ಕೂಡ ಒಳಗೆ ಬಿದ್ದಿವೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಳೆ ಹಾನಿಯ ಕುರಿತು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ತಿಳಿಸಿದ್ದೇನೆ. ಸುಮಾರು 22 ಮನೆಗಳಿಗೆ ನೀರು ನುಗ್ಗಿದೆ. ನೆಲಮಹಡಿಯಲ್ಲಿದ್ದ ಮೂರು ಕಾರುಗಳು, 15 ದ್ವಿಚಕ್ರ ವಾಹನಗಳು, ಪಡಿತರ ಮತ್ತಿತರ ವಸ್ತುಗಳು ನೀರಿನಲ್ಲಿ ಮುಳುಗಿದ್ದು, 5 ಅಡಿ ಎತ್ತರದವರೆಗೂ ನೀರು ನಿಂತಿದೆ. ಬೊಮ್ಮಾಯಿ ಅವರ ಅವಧಿಯಲ್ಲಿ ಮಳೆಹಾನಿಗಾಗಿ 25 ಸಾವಿರ ರೂ. ಮಂಜೂರಾಗಿದ್ದು, ಹೊಸ ಸರ್ಕಾರಕ್ಕೆ ಇಷ್ಟು ಮೊತ್ತವನ್ನಾದರೂ ನಿವಾಸಿಗಳಿಗೆ ನೀಡುವಂತೆ ಹೇಳಿದ್ದೇನೆ ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದರು.

ಅದೇ ರೀತಿ ನಿಹಾನ್ ಜ್ಯುವೆಲ್ಲರಿ ಅಂಗಡಿಗೆ ನೀರು ನುಗ್ಗಿದ್ದು, ಸರಕುಗಳಿಗೆ ಹಾನಿಯಾಗಿದೆ. ಇದರಿಂದ ಸುಮಾರು 2.50 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂಗಡಿ ಮಾಲೀಕರಾದ ಪ್ರಿಯಾ ಅಳಲು ತೋಡಿಕೊಂಡರು. 'ಮೇ 27 ರಂದು, ನಾನು ಅಂಗಡಿಯ ಮೊದಲ ವಾರ್ಷಿಕೋತ್ಸವದಂದು ಸಣ್ಣ ಕಾರ್ಯಕ್ರಮವನ್ನು ಯೋಜಿಸುತ್ತಿದ್ದೆ. ಆದರೆ, ಭಾನುವಾರ ಮಳೆಯಿಂದಾಗಿ ನನ್ನ ಕನಸು ಭಗ್ನವಾಯಿತು. ಚರಂಡಿ ತುಂಬಿ ಹರಿದಿದ್ದು, ಸುತ್ತಮುತ್ತಲಿನ ರಸ್ತೆಗಳಲ್ಲಿ ನೀರು ನುಗ್ಗಿದೆ. ಕೆಲವು ಚಿನ್ನಾಭರಣಗಳು ಕೊಚ್ಚಿ ಹೋಗಿವೆ' ಎಂದು ಪ್ರಿಯಾ ಹೇಳಿದ್ದಾರೆ.

ಆರ್‌ಟಿ ನಗರ ಸೇರಿದಂತೆ ಇತರೆಡೆ ಸೋಮವಾರ ಬೆಳಗಿನ ಜಾವದವರೆಗೂ ವಿದ್ಯುತ್ ಕಡಿತಗೊಂಡಿದ್ದು, ಮರಗಳು ಬಿದ್ದು ವಿದ್ಯುತ್ ಕೇಬಲ್‌ಗಳಿಗೆ ಹಾನಿಯಾಗಿದೆ. ನೃಪತುಂಗ ಲೇಔಟ್, ವಿಷ್ಣು ಗಾರ್ಡನ್ ಹೋಟೆಲ್ ರಸ್ತೆ, ಗಂಗಾನಗರ ನಿವಾಸಿಗಳು, ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ವಿದ್ಯುತ್ ಕಡಿತಗೊಂಡಿತು ಮತ್ತು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಾತ್ರ ಪುನಃಸ್ಥಾಪನೆಯಾಯಿತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com