ಡಿಎಂಕೆ ಓಲೈಸಲು ತಮಿಳುನಾಡಿಗೆ ನೀರು; ಬಿಜೆಪಿಯಿಂದ ಕಾವೇರಿ ರಕ್ಷಣಾ ಯಾತ್ರೆ: ಬೊಮ್ಮಾಯಿ, ಬಿಎಸ್ ವೈ

ಡಿಎಂಕೆ ಪಕ್ಷವನ್ನು ಓಲೈಸಲು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದು, ಇದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಜೆಪಿ ಕಾವೇರಿ ರಕ್ಷಣಾ ಯಾತ್ರೆ ನಡೆಸುತ್ತದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಸುದ್ದಿಗೋಷ್ಠಿ
ಬಿಜೆಪಿ ಸುದ್ದಿಗೋಷ್ಠಿ
Updated on

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಓಲೈಸಲು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದು, ಇದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಜೆಪಿ ಕಾವೇರಿ ರಕ್ಷಣಾ ಯಾತ್ರೆ ನಡೆಸುತ್ತದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳ ಪಕ್ಷದ ನಾಯಕರ ಜೊತೆ ಸಭೆ ನಡೆಸಿದ ನಂತರ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇಂದು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, 'ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವು ನೆರೆಯ ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆಯನ್ನು ಮೆಚ್ಚಿಸಲು ಮತ್ತು ಇಂಡಿಯಾ ಮೈತ್ರಿಕೂಟಣವನ್ನು ಬಲಪಡಿಸಲು ಕೊರತೆಯ ನಡುವೆಯೂ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ.

ಸರ್ಕಾರ ವಾಸ್ತವಾಂಶ ಸುಪ್ರೀಂ ಮುಂದಿಡಲಿ
ಜೂನ್ ತಿಂಗಳಲ್ಲಿಯೇ ಕಾವೇರಿ ನೀರು ನಿರ್ವಹಣೆ ಆಗಬೇಕಿತ್ತು. ನಾವು 30%ರಷ್ಟು ನೀರನ್ನೂ ನಮ್ಮ ರೈತರಿಗೆ ಮಾಡಿಲ್ಲ. ತಮಿಳುನಾಡು ಎರಡನೇ ಬೆಳೆ ಬೆಳೆಯುತ್ತಿದೆ‌. ಸರ್ಕಾರ ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಮುಂದೆ ಸರಿಯಾಗಿ ಪ್ರತಿಪಾದಿಸಲಿಲ್ಲ. ಸರ್ಕಾರ ರಾಜ್ಯದ ಹಿತ ಬಲಿ ಕೊಟ್ಟು ತಮಿಳುನಾಡಿನ ಎರಡನೇ ಬೆಳೆಗೆ ನೀರು ಬಿಟ್ಟಿದೆ. ಇದರ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ನೀರು ಬಿಟ್ಟು ನಮಗೆ ಸಮಸ್ಯೆ ಆಗಿದೆ. ರಾಜ್ಯ ಸರ್ಕಾರ ರಕ್ಷಣಾತ್ಮಕ ಆಗಿ ನಡೆದುಕೊಳ್ಳುತ್ತಿದೆ. ಈ ಸರ್ಕಾರ ರಾಜ್ಯದ ನೀರಿನ ಹಕ್ಕು ರಕ್ಷಣೆ ಮಾಡಿಲ್ಲ. ನೀರಿನ ಹಕ್ಕು ರಕ್ಷಣೆ ಮಾಡುವ ಬದ್ಧತೆ, ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ರಾಜ್ಯದ ವಾಸ್ತವಾಂಶ ಇಡಲಿ. ಸಿಡಬ್ಲ್ಯೂಆರ್‌ಸಿ ಮುಂದೆಯೂ ಸಮರ್ಥವಾದ ಮಾಡಲಿ, ಜಲ ಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ ಪರ ಅವರ ವೈಯಕ್ತಿಕ ಕೇಸ್ ಗಳಿಗೆ ಒಳ್ಳೊಳ್ಳೆಯ ವಕೀಲರು ಇದ್ದಾರೆ. ಹೀಗಾಗಿ ಅವರ ಕೇಸ್ ಗಳಲ್ಲಿ ಯಶಸ್ಸು ಸಿಗುತ್ತಿದೆ. ಅದೇ ರೀತಿ ಕಾವೇರಿ ವಿಚಾರಕ್ಕೂ ಒಳ್ಳೊಳ್ಳೆಯ ವಕೀಲರನ್ನು ನಿಯೋಜಿಸಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನೀರಿಲ್ಲ. ಆದರೂ ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ.ಕಾವೇರಿ ನೀರಿನ ವಿಚಾರದಲ್ಲಿ ವಿವರಣೆ ನೀಡಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ, ಕಾಂಗ್ರೆಸ್ ಸರ್ಕಾರ ಡಿಎಂಕೆ ಸರ್ಕಾರಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎಂದು ಯಡಿಯೂರಪ್ಪ ಕಿಡಿಕಾರಿದರು.

ಅಂತೆಯೇ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ ಕೈಗೊಳ್ಳಲು ಬಿಜೆಪಿ ಈಗಾಗಲೇ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದೆ. ಆರು ಜಿಲ್ಲೆಗಳ ಶಾಸಕರು ಮತ್ತು ಸಂಸದರು ಸಭೆಯಲ್ಲಿ ಭಾಗವಹಿಸಿ ಕಾರ್ಯತಂತ್ರ ಮತ್ತು ಸಿದ್ಧತೆಗಳ ಬಗ್ಗೆ ಚರ್ಚಿಸಿದರು.

ಕೇಂದ್ರದ ಮಧ್ಯಸ್ಥಿಕೆ ಅಗತ್ಯವಿಲ್ಲ: ಬೊಮ್ಮಾಯಿ
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶ ನೀಡಿದೆ. ಸರ್ವಪಕ್ಷಗಳ ನಿಯೋಗ ಕೇಂದ್ರ ಸರ್ಕಾರವನ್ನು ಸಂಪರ್ಕಿಸುವ ಅಗತ್ಯವಿಲ್ಲ, ಕೇಂದ್ರದ ಮಧ್ಯಪ್ರವೇಶದ ಅವಶ್ಯಕತೆ ಏನು? ಕೇಂದ್ರಕ್ಕೆ ಪತ್ರ ಬರೆಯುವ ಬದಲು ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ಗೆ ಪತ್ರ ಬರೆಯಲಿ. ಪತ್ರ ಸಂಬಂಧ ಇಂಡಿಯಾ ಮೈತ್ರಿಕೂಟ ಪಾಲುದಾರ ಡಿಎಂಕೆ ಪಕ್ಷದ ಜತೆಗಿರಲಿ, ಕಾಂಗ್ರೆಸ್ ಸಿಎಂ ಸ್ಟಾಲಿನ್‌ಗೆ ಪತ್ರ ಬರೆಯಲಿ, ಕಾವೇರಿ ನೀರು ಬಿಡುವುದನ್ನು ನಿಲ್ಲಿಸಿದರೆ ಸರ್ಕಾರದ ಜತೆ ನಿಲ್ಲುತ್ತೇವೆ, ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಬೊಮ್ಮಾಯಿ ಹೇಳಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಜೆಪಿಯಿಂದ ಕಾವೇರಿ ರಕ್ಷಣಾ ಯಾತ್ರೆ
ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದ ತಾಲೂಕುಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ನೀರು ಬಿಟ್ಟರೆ ಬಿಜೆಪಿಯಿಂದ ಕಾವೇರಿ ಜಲಾನಯನ ಪ್ರದೇಶಗಳ ಎಲ್ಲ ತಾಲೂಕುಗಳಲ್ಲೂ ಕಾವೇರಿ ಜನ ಜಾಗೃತಿ ಯಾತ್ರೆ ಮಾಡಲು ನಿರ್ಧಾರಿಸಲಾಗಿದೆ. ಪಾದಯಾತ್ರೆ, ಸತ್ಯಾಗ್ರಹ, ಪ್ರತಿಭಟನೆ ರೂಪದಲ್ಲಿ ಹೋರಾಟ ನಡೆಸಲಾಗುವುದು. ಸೆಪ್ಟಂಬರ್ 21 ರಂದು ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಸೆ. 21 ರಂದು ಹೋರಾಟದ ಮುಂದಿನ ರೂಪುರೇಷೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಪ್ರತಿ ಎಕರೆಗೆ 25 ಸಾವಿರ ಪರಿಹಾರ
ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ಸೂಕ್ತ ಸಮಯದಲ್ಲಿ ನೀರು ಬಿಡದೇ ಇರುವುದರಿಂದ ರೈತರ ಬೆಳೆ ಒಣಗಿದ್ದು, ಕಾವೇರಿ ಕೊಳ್ಳದ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರೂ ಪರಿಹಾರ ಕೊಡುವಂತೆ ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com